ಪಿವಿ ವಿಶೇಷ

ತಾಕತ್ತಿದ್ದರೆ ಭೈರತಿ ಸುರೇಶ್ ನನ್ನ ವಿರುದ್ಧ ಮಾಡಿರುವ ಆರೋಪಗಳ ದಾಖಲೆ ಬಿಡುಗಡೆ ಮಾಡಲಿ: ಶೋಭಾ ಕರಂದ್ಲಾಜೆ

ಬೆಳಗಾವಿ: ನಾನು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದರೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಅವರಿಗೆ ತಾಕತ್ತಿದ್ರೆ ನನ್ನ ಅಕ್ರಮದ ದಾಖಲೆ ಬಿಡುಗಡೆಗೊಳಿಸಲಿ ಎಂದು ರಾಜ್ಯ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಸವಾಲು ಹಾಕಿದ್ದಾರೆ.

ಬೆಳಗಾವಿಯ ಅಶೋಕನಗರದಲ್ಲಿರುವ ಇಎಸ್‌ಐಸಿ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಶೋಭಾ, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನೂರಾರು ದಾಖಲೆ, ಸಾಕ್ಷ್ಯಗಳನ್ನು ಸುಟ್ಟು ಹಾಕಿರುವ ನಗರಾಭಿವೃದ್ಧಿ ಸಚಿವ ಬಿ.ಸುರೇಶ್ ಅವರ ಕ್ರಮದ ವಿರುದ್ಧ ನಾನು ಧ್ವನಿ ಎತ್ತಿದ್ದೇನೆ. ಈ ರಾಜ್ಯದಲ್ಲಿ ಅನೇಕ ರಾಜಕಾರಣಿಗಳು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ ಮತ್ತು ಹತಾಶರಾಗಿದ್ದಾರೆ, ಆದ್ದರಿಂದ ಅವರು ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಶೋಭಾ ಹೇಳಿದರು.

ಕರಂದ್ಲಾಜೆ ಯಾವತ್ತೂ ಭ್ರಷ್ಟಾಚಾರ ಮಾಡಿಲ್ಲ. ಮಾಡೋದೂ ಇಲ್ಲ. ಬಿಜೆಪಿಯಲ್ಲಿ ಯಾವುದೇ ಕೆಲಸವನ್ನೂ ಕೊಟ್ಟರೂ ಅತ್ಯಂತ ಗೌರವದಿಂದ, ಜವಾಬ್ದಾರಿಯಿಂದ ಮಾಡುವವಳು ನಾನು ಎಂದರು. ನನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ಭೈರತಿ ಸುರೇಶ್ ಅವರಿಗೆ ಧೈರ್ಯವಿದ್ದರೆ ಕೂಡಲೇ ತಮ್ಮ ಹೇಳಿಕೆಯನ್ನು ಸಾಬೀತುಪಡಿಸುವ ದಾಖಲೆಗಳನ್ನು ಬಿಡುಗಡೆ ಮಾಡಬೇಕು ಎಂದಿದ್ದಾರೆ.

ಭೈರತಿ ಸುರೇಶ್ ಅವರು ಮುಡಾದಿಂದ ಫೈಲ್ ತಂದಿರುವುದು ಸತ್ಯ. ಅದನ್ನು ಸುಟ್ಟು ಹಾಕಿರುವುದು ಸತ್ಯ. ಈ ಬಗ್ಗೆ ಇ ಡಿ ತನಿಖೆ ನಡೆಯುತ್ತಿದೆ. ಲೋಕಾಯುಕ್ತ ತನಿಖೆ ನಡೆಯುತ್ತಿದೆ. ರಾಜ್ಯಪಾಲರು ಕೂಡಾ 17 ಎ ಅಡಿಯಲ್ಲಿ ತನಿಖೆ ಆಗಬೇಕು ಎಂದಿದ್ದಾರೆ.

ಈ ಭಯದಿಂದ ಭೈರತಿ ಸುರೇಶ್ ಅವರು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ನಿಮಗೆ ತಾಕತ್ತಿದ್ದರೆ ನನ್ನ ವಿರುದ್ಧ ದಾಖಲೆ ಬಿಡುಗಡೆಗೊಳಿಸಿ ಎಂದು ಸವಾಲು ಹಾಕಿದ್ದಾರೆ. ಬೆಳಗಾವಿಯ ಇಎಸ್‌ಐಸಿ ಆಸ್ಪತ್ರೆಗೆ ಭೇಟಿ ನೀಡಿ ಅದರ ಸ್ಥಿತಿಗತಿಯನ್ನು ಗಮನಿಸಿದ್ದೇನೆ. ಇಎಸ್‌ಐಸಿ ಆಸ್ಪತ್ರೆಗೆ ಹೊಸ ಕಟ್ಟಡ ನಿರ್ಮಿಸಲು ಟೆಂಡರ್‌ ಕರೆಯಲಾಗಿದೆ. ಪ್ರಸ್ತುತ ಕಟ್ಟಡವು ಕೇವಲ 50 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ರೋಗಿಗಳಿಗೆ 100 ಹಾಸಿಗೆಗಳ ಸೌಲಭ್ಯ ಕಲ್ಪಿಸಲು 152 ಕೋಟಿ ರೂ ವೆಚ್ಚದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button