ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಇಳಿಸಲು ಸ್ವಪಕ್ಷೀಯರಿಂದಲೇ ಪ್ರಯತ್ನ: ಸಚಿವ ಮಧು ಬಂಗಾರಪ್ಪ
ಶಿರಸಿ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಉಳಿಸಲು ಸ್ವಪಕ್ಷೀಯ ನಾಯಕರೇ ಪ್ರಯತ್ನ ನಡೆಸುತ್ತಿದ್ದಾರೆಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ನಟ ಶಿವರಾಜ್ ಕುಮಾರ್ ಅವರೊಂದಿಗೆ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ ಸಿದ್ದಾಪುರಕ್ಕೆ ತೆರಳಿದ ಮಧು ಬಂಗಾರಪ್ಪ ಅವರು, ಬಳಿಕ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿಯ ಎಂಟಲ್ಲ, ಹದಿನೆಂಟು ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದು, ಅವರೊಂದಿಗೆ ಯಲ್ಲಾಪುರ ಶಾಸಕ ಶಿವರಾಜ ಹೆಬ್ಬಾರ ಕೂಡ ಸದ್ಯದಲ್ಲಿಯೇ ಕಾಂಗ್ರೆಸ್ ಸೇರಲಿದ್ದಾರೆ. ಹೆಬ್ಬಾರ್ ಮೂಲ ಕಾಂಗ್ರೆಸ್ಸಿಗರು. ಅವರು ಬಂದರೆ ಬರಲಿ. ನಮ್ಮ ಅಭ್ಯಂತರವಿಲ್ಲ. ಬಿಜೆಪಿ ಸೇರ್ಪಡೆಗೊಂಡ ಎಲ್ಲಾ ಶಾಸಕರು ಪುನಃ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ನೇರವಾಗಿ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಹಣದಿಂದ ಶಾಸಕರನ್ನು ಖರೀದಿಸಿಯೇ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದರು.
ಬಿಜೆಪಿಯವರು ಬಕಾಸುಸರಾಗಿದ್ದು, ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷವನ್ನೂ ನುಂಗಿ ಹಾಕುತ್ತಾರೆ. ಸಿಪಿ.ಯೋಗೇಶ್ವರ್ ಅವರು ಕಾಂಗ್ರೆಸ್ ಸೇರುತ್ತಾರೆಂಬುದು ಮೊದಲು ಗೊತ್ತಿತ್ತು. ಉಪ ಚುನಾವಣೆಯಲ್ಲಿ ಚನ್ನಪಟ್ಟಣ ಹೊರತುಪಡಿಸಿ, ಉಳಿದ 2 ಕಡೆಗಳಲ್ಲಿ ಉತ್ತಮ ವಾತಾವರಣವಿದೆ. ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್ ಹಾಗೂ ಉಳಿದ ಸಚಿವರ ಪ್ರಯತ್ನದಲ್ಲಿ ಚನ್ನಪಟ್ಟಣವನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯೇಂದ್ರ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಂಡು ತಮ್ಮ ಹಗರಣಗಳನ್ನು ಬಿಜೆಪಿಯವರೇ ಸಾರ್ವಜನಿಕರಿಗೆ ತಿಳಿಸಿದ್ದಾರೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಲು ಯತ್ನಾಳ್, ರಮೇಶ್ ಜಾರಕಿಹೊಳಿ, ಪ್ರತಾಪ್ ಸಿಂಹ ನೇತೃತ್ವದಲ್ಲಿ ತಯಾರಿ ನಡೆಸುತ್ತಿದ್ದಾರೆ. ಯಡಿಯೂರಪ್ಪ ಹಾಗೂ ಅರ ಮಕ್ಕಳ ವಿರುದ್ಧ ಹರಹಾಯುತ್ತಿದ್ದ ಕುಮಾರಸ್ವಾಮಿ ತಮ್ಮ ಮಗ ನಿಖಿಲ್ ಅವರಿಗೆ ಚನ್ನಪಟ್ಟಣ ಟಿಕೆಟ್ ಪಡೆಯಲು ಯಡಿಯೂರಪ್ಪ ಕಾಲಿಗೆ ಬಿದ್ದಿದ್ದಾರೆ. ಈಗ ತತ್ವ, ಸಿದ್ಧಾಂತ ಎಲ್ಲಿ ಹೋದವು ಎಂದು ಪ್ರಶ್ನಿಸಿದರು.
ಇದೇ ವೇಳೆ ಕಾಂಗ್ರೆಸ್ ಪತನಗೊಳ್ಳಲಿದೆ ಎಂಬ ಬಿಜೆಪಿ ಗಡುವು ಕುರಿತ ಹೇಳಿಕೆಯನ್ನು ಲೇವಡಿ ಮಾಡಿದ ಅವರು, ಮೊದಲು ಗಣೇಶ ಚತುರ್ಥಿ ನಂತರ ಸರ್ಕಾರ ಬೀಳುತ್ತೆ ಅಂದರು, ದಸರಾ ನಂತರ ಹೋಗುತ್ತದೆ ಎಂದರು. ಈಗ ಸಿಎಂ ಹೋಗ್ತಾರೆ ಎನ್ನುತ್ತಿದ್ದಾರೆ, ಇದೆಲ್ಲಾ ಸಿಎಂ ಸಿದ್ದರಾಮಯ್ಯನವರ ಮೇಲೆ ಪರಿಣಾಮ ಬೀರಲ್ಲ ಎಂದರು.