ಭಟ್ಕಳ : ಪೊಲೀಸ್ ಇನ್ಸ್ಪೆಕ್ಟರ್ ಗೋಪಿಕೃಷ್ಣ ನೇತೃತ್ವದ ಪೊಲೀಸ್ ತಂಡದಿಂದ ಗೋ ಕಳ್ಳರ ಬಂಧನ
ಭಟ್ಕಳ: ಗೋ ಕಳ್ಳತನಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಭಟ್ಕಳ ನಗರ ಪೊಲೀಸ್ ಇನ್ಸ್ಪೆಕ್ಟರ್ ಗೋಪಿಕೃಷ್ಣ ಕೆ .ಆರ ನೇತೃತ್ವದ ತಂಡ ಬಂಧಿಸಿ ಭಟ್ಕಳ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿಗಳು ಭಟ್ಕಳದ ಜಲೀಲ್ ಹುಸೇನ್ (39), ಮೊಹಮ್ಮದ್ ಹನೀಫ್ (27) ಹಾಗೂ ಜಬ್ಬಾರ್ ಹುಸೇನ್ ಬ್ಯಾರಿ (37) ಈ ಮೂವರು ಬಂಧಿತ ಆರೋಪಿಗಳು.
ಇತ್ತೀಚೆಗೆ ಭಟ್ಕಳದ ಜಾಲಿಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ದನಕಳ್ಳತನದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರಿಂದಾಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿ ಹಿಂದೂ ಸಂಘಟನೆಗಳ ಸದಸ್ಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೆ ದನ ಕಳ್ಳತನದ ಪ್ರತಿಕ್ರಿಯೆಯಾಗಿ, ಸ್ಥಳೀಯ ಸಾಮಾಜಿಕ ಸಂಘಟನೆ ಮಜ್ಲಿಸ್-ಎ-ಇಸ್ಲಾಹ್-ಒ-ತಂಜೀಮ್ ದನ ಕಳ್ಳರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಲು ಮತ್ತು ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತರಲು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿತ್ತು.
ಜಾನುವಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಲ್ಲಿ ಜಲೀಲ್ ಹುಸೇನ್ ಮತ್ತು ಮೊಹಮ್ಮದ್ ಹನೀಫ್ ಇವರನ್ನು ಭಟ್ಕಳದಲ್ಲಿ ಬಂಧಿಸಿದ್ದು ಜಬ್ಬಾರ್ ಹುಸೇನ್ ಬ್ಯಾರಿ ಅವರನ್ನು ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಲ್ಲದೆ ಕದ್ದ ದನಗಳನ್ನು ಸಾಗಿಸಲು ಬಳಸಿದ್ದ ಎನ್ನಲಾದ ವಾಹನವನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈ ಕಾರ್ಯಾಚರಣೆ ಯಲ್ಲಿ ಭಟ್ಕಳ ನಗರ ಪೋಲಿಸ್ ಠಾಣೆಯ ಪಿ.ಎಸ್.ಐ ತಿಮಪ್ಪ, ಎ.ಎಸ್.ಐ ರವಿ ನಾಯ್ಕ್, ಹಾವಾಲ್ದಾರ್ ದೀಪಕ್ ನಾಯ್ಕ್, ದೇವು ನಾಯ್ಕ್, ಉದಯ ನಾಯ್ಕ್, ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.