ಪಿವಿ ವಿಶೇಷ

‘ಬಿಜೆಪಿ ಭ್ರಷ್ಟಪಕ್ಷ’ ಎಂದು ಲೇಬಲ್ ಕೊಟ್ಟಿದ್ದೆ ಬಿ ವೈ ವಿಜಯೇಂದ್ರ : ರಮೇಶ್ ಜಾರಕಿಹೊಳಿ ಗಂಭೀರ ಆರೋಪ

ಬೆಳಗಾವಿ : ಬಿಜೆಪಿ ರಾಜ್ಯಾಧ್ಯಕ್ಷನಾಗಿ ಬಿ.ವೈ. ವಿಜಯೇಂದ್ರ ಅವರನ್ನು ನಾನೆಂದೂ ಒಪ್ಪೋದಿಲ್ಲ. ಮುಂದಿನ ಅಧ್ಯಕ್ಷ ಯಾರು ಎಂಬುದು ಪಕ್ಷದ ವರಿಷ್ಠರು ತೀರ್ಮಾನ ಮಾಡಬೇಕು. ವಿಜಯೇಂದ್ರ ಬಿಜೆಪಿ ಪಕ್ಷದಲ್ಲಿ ಇನ್ನೂ ಜೂನಿಯರ್, ಅವನಿಗೆ ಏನೂ ಐಡಿಯಾಲಜಿ ಇಲ್ಲ. ಬಿಜೆಪಿಯ ಭ್ರಷ್ಟ ಎಂಬ ಲೇಬಲ್ ವಿಜಯೇಂದ್ರ ಮೇಲಿದೆ. ಬಿಜೆಪಿ ಭ್ರಷ್ಟ ಪಕ್ಷ ಎಂದು ಲೇಬಲ್ ಕೊಟ್ಟಿದ್ದೆ ಬಿ ವೈ ವಿಜಯೇಂದ್ರ ಎಂದು  ರಮೇಶ್ ಜಾರಕಿಹೊಳಿ ಗಂಭೀರವಾದ ಆರೋಪ ಮಾಡಿದರು.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವನು ಅಧ್ಯಕ್ಷ ಆಗಿದ್ದಕ್ಕೆ ನನಗೆ ವಿರೋಧವಿದೆ. ಹಾಗಂತ ನಾನೆಂದೂ ಯಡಿಯೂರಪ್ಪ ಅವರಿಗೆ ವಿರೋಧಿ ಅಲ್ಲ. ಯಡಿಯೂರಪ್ಪ ನಮ್ಮ ಪಕ್ಷಕ್ಕೆ ಪ್ರಶ್ನಾತೀತ ನಾಯಕ. ಯಡಿಯೂರಪ್ಪರ ಬಗ್ಗೆ ನಮಗೆ ತುಂಬಾ ಗೌರವವಿದೆ. ಆದರೆ, ವಿಜಯೇಂದ್ರ ನಮ್ಮ ಪಕ್ಷದ ನಾಯಕನಲ್ಲ ಎಂದು ತಮ್ಮದೇ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಏಕವಚನದಲ್ಲೇ ಆಕ್ರೋಶ ಹೊರಹಾಕಿದ್ದಾರೆ.

ಯಡಿಯೂರಪ್ಪನವರ ಬಗ್ಗೆ ನಮಗೆ ಬಹಳ ಗೌರವವಿದೆ. ಯಡಿಯೂರಪ್ಪಗೆ ವಯಸ್ಸಾಗಿದೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ನಮಗೆ ಯಡಿಯೂರಪ್ಪನವರ ಸಲಹೆ ಬೇಕಾದರೆ ಅವರ ಮನೆಗೆ ಹೋಗುತ್ತೇವೆ ಎಂದು ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

ಅನಂತ್ ಕುಮಾರ್ ತೀರಿಕೊಂಡ ಮೇಲೆ ಬಿಜೆಪಿಯಲ್ಲಿ ಯಾರೂ ಪ್ರಬಲ ನಾಯಕನಾಗಿಲ್ಲ. ಬಿಜೆಪಿ ಎಂಬುದು ಒಬ್ಬರ ಕೈಯಲ್ಲಿ ಆಡಳಿತ ಕೊಡುವುದು ಬೇಡ. ಸಾಮೂಹಿಕ ನಾಯಕತ್ವಕ್ಕೆ ಒತ್ತು ಕೊಡುವಂತೆ ನಾವು ಮೊನ್ನೆ ಸಭೆಯಲ್ಲಿ ಹೇಳಿದ್ದೇವೆ.ಒಬ್ಬರ ಕೈಗೆ ಪಕ್ಷ ಸಿಕ್ಕರೆ ನಾನು ಕೂಡ ಎರಡನೇ ಯಡಿಯೂರಪ್ಪನಾಗುತ್ತೇನೆ. ಆ ಚೇರ್ ಮೇಲೆ ಕೂತರೆ ಸರ್ವಾಧಿಕಾರ ಧೋರಣೆ ಬರುತ್ತದೆ. 15 ರಿಂದ 20 ಜನರ ಸಾಮೂಹಿಕ ನಾಯಕತ್ವದ ಕೈಯಲ್ಲಿ ಲೀಡರ್ ಶಿಪ್ ಕೊಡುವಂತೆ ಮನವಿ ಮಾಡಿದ್ದೇವೆ ಎಂದರು.

RSS ಸಭೆ ಕುರಿತು ಮಾತನಾಡಿ, ಸಭೆಯಲ್ಲಿ ಏನು ಚರ್ಚೆಯಾಯಿತು ಎಂದು ಹೇಳುವುದಕ್ಕೆ ಆಗುವುದಿಲ್ಲ. ತಪ್ಪು ಮಾಡಿದವರನ್ನು ಸಭೆಯಲ್ಲಿ ಮುಖಂಡರು ಬೈದಿದ್ದಾರೆ ಅಷ್ಟೇ. 15ರಿಂದ 20 ಜನರ ಸಾಮೂಹಿಕ ನಾಯಕತ್ವದಲ್ಲಿ ಮುನ್ನಡೆಸಲಿ ಎಂದು ಬಿಜೆಪಿ, ಆರ್ಎಸ್ಎಸ್ ಪ್ರಮುಖರ ಸಭೆಯಲ್ಲಿ ಮನವಿ ಮಾಡಿದ್ದೇವೆ. ವರಿಷ್ಠರು ನೀವು ಇಂತಿಂಥ ಕೆಲಸ ಮಾಡುವಂತೆ ಟಾಸ್ಕ್ ನೀಡಿದ್ದಾರೆ. 120ರಿಂದ 130 ಕ್ಷೇತ್ರಗಳನ್ನು ಗೆಲ್ಲಿಸಿಕೊಡುವ ಶಕ್ತಿ ನಮ್ಮಲ್ಲಿದೆ ಎಂದರು.

Related Articles

Leave a Reply

Your email address will not be published. Required fields are marked *

Back to top button