ಎಲ್ಲರೂ ಮುಖ್ಯಮಂತ್ರಿ ಸ್ಥಾನದ ಹಿಂದೆ ಬಿದ್ದಿದ್ದಾರೆ : ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ: ಎಲ್ಲರೂ ಮುಖ್ಯಮಂತ್ರಿ ಸ್ಥಾನದ ಹಿಂದೆ ಬಿದ್ದಿದ್ದಾರೆ. ನೀವು ಯಾರಾದರೂ ಮುಖ್ಯಮಂತ್ರಿಯಾಗಿ ನಮಗೆ ಬೇಜಾರಿಲ್ಲ. ಸಿಎಂ ರೇಸ್ ನಲ್ಲಿ ಸಿದ್ದರಾಮಯ್ಯ ಬಿಟ್ಟು 135 ಜನ ಹೋಗಲಿ ಅಭ್ಯಂತರವಿಲ್ಲ. ಪಟ್ಟಿ ಹೇಳುತ್ತಾ ಹೋದರೆ ಚುನಾವಣೆ ಲಿಸ್ಟ್ ರೀತಿ ಆಗುತ್ತದೆ. ಒಂದು ಕಡೆ ಬೆಂಬಲ ಎನ್ನುತ್ತಾರೆ ಇನ್ನೊಂದು ಕಡೆ ಹಂಬಲ ಮಾಡುತ್ತಿದ್ದಾರೆ. ಸಂವಿಧಾನಕ್ಕೆ ಮಾಡಿದ ಅಪಮಾನ ಇದು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ರಾಜೀನಾಮೆ ಕೋಡಬೇಕಿತ್ತು. ನನ್ನ ಮೇಲೆ ಅಪಾದನೆ ಬಂದಾಗ ರಾಜೀನಾಮೆ ಕೊಟ್ಟೆ. ಜಾರ್ಜ್ ಸಹ ರಾಜೀನಾಮೆ ಕೊಟ್ಟಿದ್ದರು ನಂತರ ಮಂತ್ರಿ ಸಹ ಆದರು. ಆದರೆ ತೀರ್ಪು ಬಂದರೂ ರಾಜೀನಾಮೆ ಕೊಡಲ್ಲ ಎನ್ನುತ್ತಾರೆ. ಸಿದ್ದರಾಮಯ್ಯ ನವರು ತಪ್ಪಿತಸ್ಥರಲ್ಲವೆಂದು ತಿರ್ಪು ಬರಲೆಂದು ಬೇಡಿಕೊಳ್ಳುತ್ತೇನೆ. ಕಾಂಗ್ರೆಸ್ ಸರ್ಕಾರವೇ ಐದು ವರ್ಷ ಆಡಳಿತ ಮಾಡಲಿ ಜನ ಆಯ್ಕೆ ಮಾಡಿದ್ದಾರೆ. ಸಿಎಂ ರಾಜೀನಾಮೆ ನೀಡಿದ ಮೇಲೆ ಇವರ ಯಕ್ಷಗಾನ ನೋಡಬೇಕು ಎಂದರು.
ಡಿಸಿಎಂ ಫಾರಿನ್ ಬೇಕಾದರೂ ಹೋಗಲಿ ಎಲ್ಲಾದರೂ ಹೋಗಲಿ. ಬಂಡೆ ತರ ನಿಲ್ಲುತ್ತಾರೋ, ತಲೆ ಮೇಲೆ ಬಂಡೆ ಹಾಕುತ್ತಾರೋ ನೋಡೊಣ ಎಂದರು.
ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಹೊರಬರಲು ಚಂದ್ರಶೇಖರನ್ ಕಾರಣ. ಈ ಭ್ರಷ್ಟಾಚಾರದ ಬಗ್ಗೆ ತನಿಖೆ ಮುಂದುವರೆದಿದೆ. ತನ್ನ ಕುಟುಂಬದ ಪರಿಸ್ಥಿತಿ ಸರಿ ಇಲ್ಲದಿದ್ದರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಪರಿಹಾರ ಒಂದು ರೂ. ಕೂಡ ಇನ್ನೂ ನೀಡಿಲ್ಲ.
25 ಲಕ್ಷ ರೂ. ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ನಾನು ಈಗಾಗಲೇ ಸಮಾಜ ಕಲ್ಯಾಣ ಇಲಾಖೆ ಸಚಿವ ಮಹಾದೇವಪ್ಪನವರಿಗೆ ದೂರವಾಣಿ ಮೂಲಕ ಮಾತನಾಡಿದೆ. ನಾನು ಈ ಬಗ್ಗೆ ಗಮನ ನೀಡುತ್ತೇನೆ ಎಂದಿದ್ದರು. ಮುಖ್ಯಮಂತ್ರಿಗಳು ಪರಿಹಾರದ ಹಣ ನೀಡಲು ತಿಳಿಸಿದ್ದಾರೆ ಎಂದಿದ್ದರು.
ಇದು ಹೇಳಿ ಹತ್ತು ದಿನಗಳಾಗಿವೆ. ಆದರೂ ಈವರೆಗೂ ಪರಿಹಾರದ ಹಣ ನೀಡಿಲ್ಲ. ಹೀಗಾಗಿ ನಾವು ಹಿಂದೆ ಹೇಳಿದಂತೆ ರಾಷ್ಟ್ರಭಕ್ತ ಬಳಗದಿಂದ 5 ಲಕ್ಷ ರೂ. ಪರಿಹಾರ ನೀಡಲಿದ್ದೇವೆ ಎಂದು ಈಶ್ವರಪ್ಪ ಹೇಳಿದರು.
ಸೆ. 20 ರವರೆಗೆ ನಮ್ಮ ಬೇಡಿಕೆ ಈಡೇರಿಸದೆ ಇದ್ದರೆ ಜೈಲ್ ಭರೋ ಚಳವಳಿ ಹಮ್ಮಿಕೊಳ್ಳಲಿದ್ದೇವೆ. ನಮಗೆ ಜೈಲಿಗೆ ಹೋಗುವ ಚಟವಿಲ್ಲ. ಆದರೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಲಿ ಎಂಬುದೇ ನಮ್ಮ ಉದ್ದೇಶ. ರಾಜ್ಯ ಸರ್ಕಾರ ಬದುಕಿದ್ದರೆ ಪರಿಹಾರದ ಹಣ ಬಿಡುಗಡೆ ಮಾಡಲಿ. ರಾಜ್ಯ ಸರ್ಕಾರ ಕೇವಲ ರಾಜಕೀಯದಲ್ಲಿ ತೊಡಗಿಕೊಂಡಿದೆ. ಮುಖ್ಯಮಂತ್ರಿ ಯಾರು ಆಗಬೇಕೆಂದು ಹಠಕ್ಕೆ ಬಿದ್ದಿದ್ದಾರೆ. ಯಾರಾದರೂ ಸಿಎಂ ಆಗಿ ಹಾಳಾಗಿ ಹೋಗಲಿ. ಮೊದಲು ಚಂದ್ರಶೇಖರನ್ ಕುಟುಂಬಕ್ಕೆ ಪರಿಹಾರದ ಹಣ ನೀಡಿ ಎಂದರು.