ಪಿವಿ ವಿಶೇಷ

ಡಿ-ಗ್ಯಾಂಗ್‌ ವಿರುದ್ಧ 3,991 ಪುಟಗಳ ಆರೋಪ ಪಟ್ಟಿ ಕೋರ್ಟ್‌ಗೆ ಸಲ್ಲಿಕೆ

ಬೆಂಗಳೂರು: ರೇಣಕಾಸ್ವಾಮಿ ಕೊಲೆ ಪ್ರಕರಣದ ದೋಷಾರೋಪ ಪಟ್ಟಿಯನ್ನು ತನಿಖಾಧಿಕಾರಿಗಳು ಬುಧವಾರ ಕೋರ್ಟ್‌ಗೆ ಸಲ್ಲಿಸಿದ್ದಾರೆ.

ತನಿಖಾಧಿಕಾರಿ ಎಸಿಪಿ ಚಂದನ್‌ ಅವರ ನೇತೃತ್ವದಲ್ಲಿ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಗೆ ಸಲ್ಲಿಸಲಾಗಿದೆ. ಸುಮಾರು 3,991 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿರುವುದಾಗಿ ತಿಳಿದುಬಂದಿದೆ.

ಪ್ರಕರಣದಲ್ಲಿ ದರ್ಶನ್‌ ಎ2 ಆಗಿದ್ದು, ಪವಿತ್ರಾ ಗೌಡ ಎ1 ಆಗಿದ್ದಾರೆ ಎಂದು ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಈ ಮೊದಲು ದರ್ಶನ್‌ ಅವರನ್ನು ಎ1 ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ  ಸಿಎಫ್‌ ಎಲ್‌ನ ಕೆಲವು ವರದಿಗಳು ಬರಲು ಬಾಕಿಯಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಹಂತದ ಆರೋಪಪಟ್ಟಿಯನ್ನು ಸಲ್ಲಿಸಲಾಗಿದೆ ಎನ್ನಲಾಗಿದೆ.

ಹಲವು ಸಾಕ್ಷ್ಯಗಳ ಉಲ್ಲೇಖ: ಕೋರ್ಟ್‌ಗೆ ಸಲ್ಲಿಕೆ ಮಾಡಿರುವ ದೋಷಾರೋಪ ಪಟ್ಟಿಯಲ್ಲಿ ಆರೋಪಿಗಳ ವಿರುದ್ಧ ಹಲವು ಸಾಕ್ಷ್ಯಗಳನ್ನು ಉಲ್ಲೇಖ ಮಾಡಲಾಗಿದೆ. 3 ಪ್ರತ್ಯಕ್ಷ ಸಾಕ್ಷಿಗಳಿದ್ದು, ಎಫ್ಎಸ್ಎಲ್ ಮತ್ತು ಸಿಎಫ್ಎಸ್ಎಲ್ನಿಂದ 8 ವರದಿಗಳಿವೆ. 27 ಜನರ 164ರ ಅಡಿಯಲ್ಲಿ ಹೇಳಿಕೆ, 161 ಅಡಿಯಲ್ಲಿ 70 ಜನರ ಹೇಳಿಕೆಯನ್ನು ಪೊಲೀಸರು  ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಜೊತೆಗೆ 59 ಜನ ಸಮಕ್ಷಮದಲ್ಲಿ ಮಹಜರು ಮಾಡಲಾಗಿದೆ. 8 ವೈದ್ಯರು, ತಹಶೀಲ್ದಾರ್‌ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಸಾಕ್ಷಿ ಕೂಡ ಉಲ್ಲೇಖ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಕಮಿಷನರ್‌ ಹೇಳಿದ್ದೇನು? : ಪ್ರಕರಣ ಸಂಬಂಧ ಕಮಿಷನರ್ ದಯಾನಂದ್ ಮಾತನಾಡಿ,  ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಸಂಪೂರ್ಣವಾಗಿ ಮುಗಿದಿದೆ. ಇಂದು ಅಂತಿಮ ವರದಿ ಸಲ್ಲಿಕೆ ಮಾಡಿದ್ದೇವೆ. ಒಟ್ಟು 17 ಮಂದಿಯನ್ನು ಬಂಧಿಸಲಾಗಿದೆ. ಸಿಎಫ್‌ ಎಲ್‌ ನಿಂದ ಎಲ್ಲಾ ವರದಿಗಳು ಬಂದಿದ್ದು, ಎಸ್‌ ಎಫ್‌ ಎಲ್‌ ನಿಂದ ಕೆಲ ವರದಿಗಳು ಬರಲು ಬಾಕಿಯಿದೆ. 7 ಸಂಪುಟಗಳ,10 ಕಡತಗಳನ್ನು ಒಳಗೊಂಡ 3991 ಪುಟಗಳ ಬೃಹತ್‌ ಚಾರ್ಜ್‌ ಶೀಟ್‌ ಇದು. ಇದರಲ್ಲಿ ಪ್ರತ್ಯಕ್ಷ ಸಾಕ್ಷಿ 3ಗಳಿದ್ದು, 27 ಸಾಕ್ಷಿ ಜನರ ಸಾಕ್ಷಿಗಳ ಹೇಳಿಕೆಯನ್ನು ಪಡೆಯಲಾಗಿದೆ59 ಜನರ ಪಂಚನಾಮೆ ನಡೆಸಲಾಗಿದೆ. ತಹಶೀಲ್ದಾರು, ಇಂಜಿನಿಯರ್‌, ವೈದ್ಯರು ಸೇರಿದಂತೆ ವಿವಿಧ ಸರ್ಕಾರಿ ಅಧಿಕಾರಿಗಳ ಹೇಳಿಕೆ ಸೇರಿದಂತೆ 231 ಸಾಕ್ಷಿಗಳಿವೆ. ಮುಂದಿನ ತನಿಖೆಯನ್ನು 174ರ ಅಡಿಯಲ್ಲಿ ಪ್ರಾರಂಭ ಮಾಡುತ್ತೇವೆ ಎಂದು ಹೇಳಿದ್ದಾರೆ.

ಸಿಆರ್ಪಿಸಿ 173(8) ಅಡಿಯಲ್ಲಿ ಪ್ರಾಥಮಿಕ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಶೀಘ್ರದಲ್ಲಿ ಪ್ರಕರಣವನ್ನು ಸೆಷೆನ್ಸ್‌ ಕೋರ್ಟ್‌ಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button