ಪಿವಿ ವಿಶೇಷ

10 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಉಡುಪಿ ಜಿಲ್ಲಾ ಪೊಲೀಸ್‌ ಶ್ವಾನ ‘ಐಕಾನ್’

ಉಡುಪಿ: ಕಳೆದ 10 ವರ್ಷ 25 ದಿನಗಳಿಂದ ಉಡುಪಿ ಜಿಲ್ಲೆಯ ಪೊಲೀಸ್‌ ಶ್ವಾನದಳದಲ್ಲಿ ಸ್ಫೋಟಕ ಪತ್ತೆ ಕಾರ್ಯ ನಿರ್ವಹಿಸುತ್ತಿದ್ದ ಶ್ವಾನ ಐಕಾನ್‌ ನಿವೃತ್ತಿ ಹೊಂದಿದೆ.

ಲ್ಯಾಬ್ರಡಾರ್‌ ರಿಟ್ರೀವರ್‌ ತಳಿಯ ಈ ಶ್ವಾನವು ಆಗಸ್ಟ್ 5, 2014 ರಂದು ಜನಿಸಿದ್ದು, ನವೆಂಬರ್ 5, 2014 ರಂದು ಶ್ವಾನದಳ ವಿಭಾಗಕ್ಕೆ ಸೇರ್ಪಡೆಗೊಂಡಿದೆ. ಎಪಿಸಿ. ಗಣೇಶ ಎಂ. 1444 ರವರು ಹ್ಯಾಂಡ್ಲರ್‌ ಆಗಿ ಕರ್ತವ್ಯ ನಿರ್ವಹಿಸಿದ್ದರು.

ಸಿ.ಎ.ಆರ್‌ ಸೌತ್‌ ಆಡುಗೋಡಿಯಲ್ಲಿ ಸ್ಫೋಟಕ ಪತ್ತೆ ಬಗ್ಗೆ 09 ತಿಂಗಳು ಕಠಿಣ ತರಬೇತಿಯನ್ನು ಪಡೆದು ಉಡುಪಿ ಜಿಲ್ಲೆಯಲ್ಲಿ ಹಾಗೂ ಹೊರ ಜಿಲ್ಲೆಯಲ್ಲಿ ಸುಮಾರು 417 ಕ್ಕಿಂತ ಅಧಿಕ ವಿಶೇಷ ಕರ್ತವ್ಯ ನಿರ್ವಹಿಸಿದ್ದು, ಈ ಶ್ವಾನವು ಗೌರವಾನ್ವಿತ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು, ವಿದೇಶಿ ಗಣ್ಯರು ಹಾಗೂ ಗಣ್ಯಾತಿಗಣ್ಯರ ಆಗಮನದ ಸಂಧರ್ಭದಲ್ಲಿ ಹಾಗೂ ಏರ್‌ ಶೋ, ಜಿ-20 ಶೃಂಗಸಭೆ, ದತ್ತ ಜಯಂತಿ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಪಂದ್ಯಾವಳಿ, ಸಾಗರ ಕವಚ ಹಾಗೂ ಪ್ರತಿನಿತ್ಯದ ಕರ್ತವ್ಯದಲ್ಲಿ ಮಲ್ಪೆ ಬಂದರು, ಕಾಪು ಲೈಟ್‌ಹೌಸ್‌, ಮಣಿಪಾಲ ಯೂನಿವರ್ಸಿಟಿ, ರೈಲ್ವೇ ನಿಲ್ದಾಣ, ನಾಗಾರ್ಜುನ, ಮೈಸೂರು ದಸರಾ, ನ್ಯಾಷನಲ್‌ ನಾರ್ಕೋಟಿಕ್ಸ್‌ ಕಾನ್ಫರೆನ್ಸ್‌, ಬ್ರಹ್ಮಾವರದಲ್ಲಿ ಕಚ್ಚಾ ಬಾಂಬ್‌ ಪತ್ತೆ ಇತ್ಯಾದಿ ಸಂಧರ್ಭಗಳಲ್ಲಿ ಸ್ಪೋಟಕ ಪತ್ತೆ ಕಾರ್ಯದಲ್ಲಿ ಯಾವುದೇ ವಿಧ್ವಂಸಕ ಕೃತ್ಯ ನಡೆಯದಂತೆ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿತ್ತು.

ಫೆಬ್ರವರಿ 22, 2020 ರಂದು ನಡೆದ ಪೊಲೀಸ್ ಕರ್ತವ್ಯ ಕೂಟದಲ್ಲಿ ಬೆಳ್ಳಿಯ ಪದಕ ಪಡೆದು, ಉಡುಪಿ ಜಿಲ್ಲೆಗೆ ಹಾಗೂ ಪೊಲೀಸ್‌ ಇಲಾಖೆಗೆ ಗೌರವವನ್ನು ತಂದು ಕೊಟ್ಟ ಕೀರ್ತಿ ಇದಕ್ಕಿದೆ.

ಕಾರ್ಯಕ್ರಮದಲ್ಲಿ ಪೊಲೀಸ್‌ ಅಧೀಕ್ಷಕರಾದ ಡಾ|| ಅರುಣ್‌ ಕೆ. ಐ.ಪಿ.ಎಸ್‌ , ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಶ್ರೀ ಪರಮೇಶ್ವರ ಹೆಗಡೆ ಕೆ.ಎಸ್.ಪಿ.ಎಸ್., ಉಡುಪಿ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕರಾದ ಶ್ರೀ ಪ್ರಭು ಡಿ.ಟಿ, ಕೆ.ಎಸ್.ಪಿ.ಎಸ್ ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ಉಪಾಧೀಕ್ಷಕರಾದ ಶ್ರೀ ತಿಮ್ಮಪ್ಪ ಗೌಡ ಜಿ. ಕೆ.ಎಸ್.ಪಿ.ಎಸ್, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ನಿರೀಕ್ಷಕರಾದ ಶ್ರೀ ಎಸ್. ರವಿಕುಮಾರ್‌ ಹಾಗೂ ಜಿಲ್ಲೆಯ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button