ಚಿನ್ನದ ಓಲೆ ದೋಚಿ ಪರಾರಿಯಾಗಿದ್ದ ಪ್ರಕರಣ, ಸ್ಥಳಕ್ಕೆ ಎಸ್ ಪಿ ಡಾ ಬಿ ಟಿ ಕವಿತಾ ಭೇಟಿ…!
ಹನೂರು :- ಅಪರಿಚಿತ ವ್ಯಕ್ತಿಗಳಿಬ್ಬರು ಜಮೀನಿನಲ್ಲಿ ಬೇವಿನ ಮರದ ಬೀಜ ಸಂಗ್ರಹಣೆ ಮಾಡುತ್ತಿದ್ದ ಮಹಿಳೆಯೋರ್ವಳಿಂದ ಚಿನ್ನದ ಓಲೆ ದೋಚಿ ಪರಾರಿಯಾಗಿದ್ದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಬಿ ಟಿ ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಣಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರನತ್ತ ಗ್ರಾಮದ ರಾಜಮ್ಮ ಕೂಲಿ ಕೆಲಸಕ್ಕೆ ಎಂದು ಬೇವಿನ ಮರಗಳಿಂದ ಕೆಳಗೆ ಬಿದ್ದಿದ್ದ ಬೇವಿನ ಬೀಜಗಳನ್ನು ನಂಜೇಒಡೆಯರ್ ದೊಡ್ಡಿ ಗ್ರಾಮದ ಸಮೀಪದ ಜಮೀನಿನಲ್ಲಿ ಸಂಗ್ರಹಿಸುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ರಾಜಮ್ಮ ರವರ ಬಳಿ ಬಂದು ಸುತ್ತಮುತ್ತ ಗ್ರಾಮಗಳಲ್ಲಿ ಜಮೀನು ಮಾರಾಟ ಮಾಡುತ್ತಾರೆಯೇ ಎಂದು ಕೇಳುತ್ತಾ ನನ್ನ ಬಳಿ ಬಂದು ಒಬ್ಬ ವ್ಯಕ್ತಿ ಏಕಾಏಕಿ ನನ್ನ ಕಿವಿಯಲ್ಲಿರುವ ಚಿನ್ನದ ಓಲೆಯನ್ನು ಬಿಚ್ಚಿಕೊಡುವಂತೆ ಎದುರಿಸಿದನು, ತಕ್ಷಣ ನಾನು ಕಿರುಚಿಕೊಂಡಾಗ ಆ ವ್ಯಕ್ತಿ ತನ್ನ ಕೈಯಿಂದ ನನ್ನ ಎಡ ಹುಬ್ಬಿನ ಮೇಲೆ ಹೊಡೆದು ಬಾಯಿ ಮುಚ್ಚಿಕೊಂಡು ಎರಡು ಕಿವಿಗಳಿದ್ದ 8 ಗ್ರಾಂ ಅಂದಾಜು 30 ಸಾವಿರ ಮೌಲ್ಯದ ಚಿನ್ನದ ಓಲೆಗಳನ್ನು ಬಿಚ್ಚಿಕೊಂಡು ಓಡಿ ಹೋಗಿದ್ದಾರೆ. ಈ ವ್ಯಕ್ತಿಗಳನ್ನು ಪತ್ತೆ ಮಾಡಿ ಅವರುಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನೊಂದ ಮಹಿಳೆಯ ರಾಜಮ್ಮ ಹನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.ಈ ಹಿನ್ನೆಲೆ ಘಟನಾ ಸ್ಥಳಕ್ಕೆ ಎಸ್‌ಪಿ ಡಾ, ಬಿ ಟಿ ಕವಿತಾ ಕೊಳ್ಳೇಗಾಲ ಉಪ ವಿಭಾಗ ಡಿವೈಎಸ್ಪಿ ಧರ್ಮೇಂದ್ರ, ಇನ್ಸ್ಪೆಕ್ಟರ್ ಶಶಿಕುಮಾರ್ ರವರು ಭೇಟಿ ನೀಡಿ ಚಿನ್ನ ಕಳೆದುಕೊಂಡಿದ್ದ ರಾಜಮ್ಮ ರವರಿಂದ ಮಾಹಿತಿ ಪಡೆದುಕೊಂಡು ಸ್ಥಳ ಮಹಜರ್ ನಡೆಸಿದರು. ಈ ವೇಳೆ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಪ್ರಸಾದ್ ಪೇದೆ ರಾಘವೇಂದ್ರ, ರಾಜು, ಹಾಜರಿದ್ದರು.
ಇಬ್ಬರು ಅಪರಿಚಿತ ವ್ಯಕ್ತಿಗಳು ಮಹಿಳೆಯಿಂದ ಕಿವಿಯ ಓಲೆ ಕಿತ್ತುಕೊಂಡು ಹೋಗಿರುವ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ. ಅವರಿಂದ ಚಿನ್ನದ ಓಲೆ ವಶಕ್ಕೆ ಪಡೆದು ನೊಂದ ಮಹಿಳೆಗೆ ನೀಡಲಾಗುವುದು. ಇದಲ್ಲದೆ ಹನೂರು ವ್ಯಾಪ್ತಿಯ ಗ್ರಾಮಗಳಲ್ಲಿ ಸಂಜೆ ಆರು ಗಂಟೆಯಿಂದ ಒಂಬತ್ತು ಗಂಟೆವರೆಗೆ ಗಸ್ತುತಿರುಗಲು ಸೂಚನೆ ನೀಡಲಾಗಿದೆ . ಇದರಿಂದ ಅನೈತಿಕ ಚಟುವಟಿಕೆಗಳು ನಿಲ್ಲಲಿದೆ ಅಪರಿಚಿತ ವ್ಯಕ್ತಿಗಳು ತಿರುಗಾಡುವುದು ಕಂಡು ಬಂದರೆ ಸಾರ್ವಜನಿಕರು ಸಹ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಡಾ ಬಿ ಟಿ ಕವಿತಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಾಮರಾಜನಗರ