ಇನ್ನೂ ಹತ್ತು ತಿಂಗಳು ಸರ್ಕಾರ ನಡೆಸಿ ನೋಡೋಣ: ಕಾಂಗ್ರೆಸ್ಗೆ ಎಚ್ಡಿಕೆ ಸವಾಲ್
ಬೆಂಗಳೂರು: ಕಾಂಗ್ರೆಸ್ ಅಲ್ಪಾಯುಷಿ ಸರಕಾರ. ಸಾಧ್ಯವಾದರೆ ಇನ್ನೂ ಹತ್ತು ತಿಂಗಳು ಸರಕಾರ ನಡೆಸಿ ನೋಡೋಣ ಎಂದು ಕೇಂದ್ರ ಸಚಿವ, ಜೆಡಿಎಸ್ ಮುಖಂಡ ಎಚ್ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ʼಮೈಸೂರು ಚಲೋʼ ಬಿಜೆಪಿ- ಜೆಡಿಎಸ್ ಪಾದಯಾತ್ರೆಗೂ ಮೊದಲು ಅವರು ಮಾತನಾಡಿದರು.
ನನ್ನ ವಿರುದ್ಧ ಕಾಂಗ್ರೆಸ್ ಅಧ್ಯಕ್ಷರ ಆರೋಪಕ್ಕೆ ಬಿಡದಿ ಹಾಗೂ ರಾಮನಗರದಲ್ಲಿ ಮಾತನಾಡ್ತೀನಿ. ನನಗೆ ರಾಜಕೀಯ ಜನ್ಮ ಕೊಟ್ಟ ಸ್ಥಳದಲ್ಲಿ ಮಾತನಾಡ್ತೀನಿ. ನಾನು ರಾಜ್ಯದ ನಾಯಕರ ದಾಖಲೆ ಹೈಕಮಾಂಡ್ಗೆ ಕೊಟ್ಟಿದ್ದೇನೆ ಎಂದು ಆರೋಪ ಮಾಡಿದ್ದಾರೆ. ದೊಡ್ಡ ಹಾಲಹಳ್ಳಿಯಲ್ಲಿ ಬ್ಲಾಕ್ ಆಂಡ್ ವೈಟ್ ಟಿವಿ ಹಾಗೂ ವಿಡಿಯೋ ಪ್ಲೇಯರ್ನಲ್ಲಿ ಅದೇನೋ ಹಾಕಿ ಹಣ ಸಂಪಾದನೆ ಮಾಡಿದ ಇವರಿಗೆ ನಾಚಿಕೆ ಆಗಬೇಕು ಎಂದು ಎಚ್ಡಿಕೆ ಟೀಕಿಸಿದ್ದಾರೆ.
ಹಿಂದುಳಿದ ವರ್ಗಗಳ ನಾಯಕರು ನಮ್ಮನ್ನ ಪ್ರಶ್ನೆ ಮಾಡಿದ್ದಾರೆ. ಎರಡೆರಡು ಬಾರಿ ಸಿಎಂ ಆಗಿದ್ದರಿಂದ ಸಹಿಸಲು ಆಗ್ತಿಲ್ಲ ಅಂತ ಆರೋಪ ಮಾಡಿದ್ದಾರೆ. ಪರಮೇಶ್ವರ್ ಅವರೇ, ಇಂದು ಯಾದಗಿರಿಯ ಪಿಎಸ್ಐ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ನಿಮ್ಮ ಸಮುದಾಯದವರೇ ಅಲ್ವಾ? ಸಿದ್ದರಾಮಯ್ಯ 2013ರಿಂದ 2017ರವರೆಗೂ ಇದ್ದಾಗ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಮಾಡಿಕೊಂಡ್ರಲ್ಲ, ಅವರು ಯಾವ ಸಮುದಾಯ ಸಿದ್ದರಾಮಯ್ಯ ಅವರೇ? ಎಂದು ಎಚ್ಡಿಕೆ ಪ್ರಶ್ನಿಸಿದ್ದಾರೆ.
ಹಿಂದುಳಿದ ವರ್ಗಗಳ ನಾಯಕರು ಇದನ್ನ ಗಮನಿಸಲಿ. ಮುಡಾ ಜಮೀನು ರಿಜಿಸ್ಟ್ರಾರ್ ಮಾಡಿಸಿಕೊಂಡಿದ್ದು ತಪ್ಪು ಅಲ್ಲವೇ. 2010ಕ್ಕೆ ಸಹೋದರಿಗೆ ದಾನ ಮಾಡ್ತಾರೆ. ಇದರಲ್ಲಿ ನಿಮ್ಮ ಪಾತ್ರ ಇಲ್ವಾ? ಕುಮಾರಸ್ವಾಮಿ ಬಣ್ಣ ಬದಲಾಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ. ನನ್ನದು ಒರಿಜಿನಲ್ ಬಣ್ಣ, ಬದಲಾಗಲು ಸಾಧ್ಯವಿಲ್ಲ. 2006ರಲ್ಲಿ ಸರ್ಕಾರ ಮುಂದುವರಿದಿದ್ರೆ ಕಾಂಗ್ರೆಸ್ ಅಂದೇ ನಿರ್ನಾಮ ಆಗುತ್ತಿತ್ತು ಎಂದಿದ್ದಾರೆ.
2018ರಲ್ಲಿ ನಾನು ಅರ್ಜಿ ಇಟ್ಕೊಂಡು ಬಂದಿರಲಿಲ್ಲ. ಗುಲಾಂ ನಬಿ ಆಜಾದ್ ಅವರು ದೇವೇಗೌಡರ ಮನೆಗೆ ಓಡಿ ಬಂದರು. ನಾವು ಮಲ್ಲಿಕಾರ್ಜುನ ಖರ್ಗೆಯವರನ್ನ ಮಾಡಿ ಎಂದು ಹೇಳಿದೆವು. ನೀವು ನೀವೇ ಆಗಿ ಎಂದು ಹೇಳಿದಿರಿ. ಇನ್ನೂ ಹತ್ತು ತಿಂಗಳು ಸರ್ಕಾರ ನಡೆಸಿ ನೋಡೋಣ. ಕಾಂಗ್ರೆಸ್ ಅಲ್ಪಾಯಿಷಿ ಸರ್ಕಾರ. ಸಿದ್ದರಾಮಯ್ಯ ಮುಡಾ ದಾಖಲೆ ಕೊಟ್ಟಿದ್ದೇ ಡಿಕೆ ಶಿವಕುಮಾರ್. ಇನ್ನೂ ಯಾಕೆ ನಾಟಕ ಮಾಡ್ತೀರಿ ಎಂದು ಎಚ್ಡಿಕೆ ವಾಗ್ದಾಳಿ ನಡೆಸಿದರು.