ಪಿವಿ ವಿಶೇಷ

‘ಸೋರುತಿಹುದು ಸಂಸತ್ ಮಾಳಿಗೆ… ಸೋರುತಿಹುಹುದು ದೇಶದ ಮಾಳಿಗೆ’ – ಕಾಂಗ್ರೆಸ್ ನಿಂದ ಟೀಕಾಸ್ತ್ರ

ಹೊಸದಿಲ್ಲಿ: ವರ್ಷದ ಹಿಂದಷ್ಟೇ ಉದ್ಘಾಟನೆಯಾಗಿದ್ದ ದೆಹಲಿಯ ನೂತನ ಸಂಸತ್ ಭವನ ಈಗ ಮಳೆಗಾಲದಲ್ಲಿ ಸೋರಲಾರಂಭಿಸಿದೆ! ಹೀಗೆಂದು, ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ. ತನ್ನೀ ಟೀಕೆಗೆ ಸಂತ ಶಿಶುನಾಳ ಶರೀಫರ ಸೋರುತಿಹುದು ಮನೆಯ ಮಾಳಿಗೆ ಹಾಡನ್ನು ಬಳಸಿಕೊಂಡಿರುವ ಕಾಂಗ್ರೆಸ್, ‘ಸೋರುತಿಹುದು ಸಂಸತ್ ಮಾಳಿಗೆ, ಅಜ್ಞಾನದಿಂದ, ಭ್ರಷ್ಟರಿಂದ ಸೋರುತಿಹುಹುದು ದೇಶದ ಮಾಳಿಗೆ’ ಎಂದು ಹೇಳಿದೆ.

ಸದ್ಯಕ್ಕೆ ಹೊಸ ಸಂಸತ್ ಭವನದಲ್ಲಿ 2024-25 ಬಜೆಟ್ ಅಧಿವೇಶನ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ದೆಹಲಿಯಲ್ಲಿ ಬುಧವಾರದಂದು (ಜು. 31) ಕುಂಭದ್ರೋಣ ಮಳೆಯಾಗಿದೆ. ಅದರ ಕಾರಣದಿಂದ ಸಂಸತ್ತಿನ ಪಡಸಾಲೆಯಲ್ಲೇ ಸಂಸತ್ತಿನ ಮೇಲ್ಛಾವಣಿಯಿಂದ ಒಂದು ಕಡೆ ನೀರು ತೊಟ್ಟಿಕ್ಕುತ್ತಿದೆ. ಈಗಾಗಲೇ ಸಂಸತ್ ಭವನ ಸೋರುತ್ತಿರುವುದರ ಬಗ್ಗೆ ವಿಪಕ್ಷಗಳು ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡಲಾಗಿದೆ. ಹಲವಾರು ಕಡೆ ಸೋರುತ್ತಿರುವ ನೀರನ್ನು ಸಂಗ್ರಹಿಸಲು ಅಲ್ಲಿ ಬಕೆಟ್ ಗಳನ್ನು ಇಡಲಾಗಿದೆ. ಇದರ ವಿಡಿಯೋವೊಂದನ್ನು ಕರ್ನಾಟಕ ಕಾಂಗ್ರೆಸ್ ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಪ್ರಕಟಿಸಿರುವ ಕಾಂಗ್ರೆಸ್, ಬಿಜೆಪಿ ವಿರುದ್ಧ ತನ್ನ ವಾಗ್ಬಾಣ ಬಿಟ್ಟಿದೆ.

“ಸೋರುತಿಹುದು ಸಂಸತ್ ಮಾಳಿಗೆ, ಅಜ್ಞಾನದಿಂದ, ಭ್ರಷ್ಟರಿಂದ ಸೋರುತಿಹುಹುದು ದೇಶದ ಮಾಳಿಗೆ. ಪಾರ್ಲಿಮೆಂಟ್ ಒಳಗೆ ಮಳೆ ನೀರು ಸೋರಿಕೆ, ಹೊರಗೆ ಪ್ರಶ್ನೆಪತ್ರಿಕೆ ಸೋರಿಕೆ! 20,000 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಸೆಂಟ್ರಲ್ ವಿಸ್ತಾ ಎಂಬ ನೂತನ ಸಂಸತ್ ಭವನದ ಒಳಗೆ ಮೊದಲ ವರ್ಷಕ್ಕೆ ಮಳೆ ನೀರು ಸೋರಿಕೆಯಾಗಿದೆ’’ ಎಂದು ಟೀಕಿಸಿದೆ.

ಅಷ್ಟೇ ಅಲ್ಲದೆ, “ಅಚ್ಚೆ ದಿನಗಳ ವಿಕಾಸದಲ್ಲಿ ವಾರಕ್ಕೆ ಮೂರು ಸೇತುವೆಗಳು ಮುರಿದು ಬೀಳುತ್ತಿವೆ. ದಿನಕ್ಕೊಂದು ರೈಲು ಹಳಿ ತಪ್ಪುತ್ತಿವೆ. ರಾಮಮಂದಿರದೊಳಗೆ ನೀರು ಇಳಿಯುತ್ತಿದೆ. ಸಂಸತ್ ಭವನವೂ ಸೋರುತ್ತಿದೆ. ಮೋದಿಯವರ 10 ವರ್ಷದ ಆಡಳಿತದಲ್ಲಿ ಒಂದೇ ಒಂದು ಲೋಪವಿಲ್ಲದ ಕೆಲಸ ಆಗಿದೆಯೇ?’’ ಎಂದೂ ಅದು ಪ್ರಶ್ನಿಸಿದೆ.

ಅಂದಹಾಗೆ, ಗುಜರಾತ್ ನಲ್ಲಿ ನಿರ್ಮಿಸಲಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ, ಸರ್ದಾರ್ ವಲ್ಲಭಬಾಯಿಯವರ ಏಕತಾ ಪ್ರತಿಮೆಯಲ್ಲೂ ಮಳೆ ನೀರು ಸೋರಿಕೆಯಾಗುತ್ತಿದೆ ಎಂಬ ಆರೋಪಗಳು 2019ರಲ್ಲಿ ಕೇಳಿಬಂದಿದ್ದವು. ಆಗಲೂ ಕಾಂಗ್ರೆಸ್, ಬಿಜೆಪಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿತ್ತು.

Related Articles

Leave a Reply

Your email address will not be published. Required fields are marked *

Back to top button