ವಯನಾಡ್ ಗುಡ್ಡ ದುರಂತದಲ್ಲಿ ಸಾವನ್ನಪ್ಪಿದ ಕನ್ನಡಿಗರೆಷ್ಟು? ನಾಪತ್ತೆಯಾದವರು ಎಷ್ಟು? ಮಾಹಿತಿ ಹಂಚಿಕೊಂಡ ಸಂತೋಷ್ ಲಾಡ್
ಬೆಂಗಳೂರು/ಕೇರಳ: ಕೇರಳದ ವಯನಾಡು ಜಿಲ್ಲೆಯಲ್ಲಿ ಗುಡ್ಡ ಕುಸಿದು ದೊಡ್ಡ ದುರಂತ ಸಂಭವಿಸಿದೆ. ಘಟನೆಯಲ್ಲಿ ಸದ್ಯ ಮೃತಪಟ್ಟರವರ ಸಂಖ್ಯೆ 254ಕ್ಕೆ ಏರಿಕೆ ಆಗಿದೆ. ಕರ್ನಾಟಕದಿಂದ ಎಲ್ಲಾ ರೀತಿಯ ನೆರವು ನೀಡುವುದಾಗಿ ಸಿಎಂ ತಿಳಿಸಿದ್ದಾರೆ. ಸಿದ್ದರಾಮಯ್ಯ ಸೂಚನೆ ಮೇರೆಗೆ ಇದೀಗ ದುರಂತ ಸ್ಥಳಕ್ಕೆ ತುರ್ತಾಗಿ ಅಧಿಕಾರಿಗಳೊಂದಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಭೇಟಿ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಸಂತೋಷ್ ಲಾಡ್, ಸಿಎಂ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಗುಡ್ಡ ಕುಸಿತದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ತೆರಳುತ್ತಿದ್ದೇನೆ.
ಈಗಾಗಲೇ ನಾಲ್ವರು ಕನ್ನಡಿಗರು ಮೃತಪಟ್ಟಿರುವುದಾಗಿ ತಿಳಿದು ಬಂದಿದ್ದು, ಇನ್ನೂ ಹಲವರು ಸಿಲುಕಿರುವ, ನಾಪತ್ತೆಯಾಗಿರುವ ಮಾಹಿತಿ ಇದೆ. ಅವರೆಲ್ಲರ ರಕ್ಷಣೆಗೆ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಸಚಿವ ಸಂತೋಷ್ ಲಾಡ್ ಹೇಳಿದ್ದಿಷ್ಟು
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಬೆಪ್ಪಾಡಿಯಲ್ಲಿ ಸಚಿವ ಸಂತೋಷ್ ಲಾಡ್, ದುರಂತದಲ್ಲಿ ಇದುವರೆಗೆ 254 ಜನರು ಸಾವನಪ್ಪಿದ್ದಾರೆ. ದುರಂತದಲ್ಲಿ ಕರ್ನಾಟಕದ ಮೂವರು ಮೃತಪಟ್ಟಿದ್ದು, 9 ಜನರು ನಾಪತ್ತೆಯಾಗಿದ್ದಾರೆ. 10 ಕನ್ನಡಿಗರನ್ನ ರಕ್ಷಿಸಿ ಕಾಳಜಿ ಕೇಂದ್ರದಲ್ಲಿರಿಸಿದ್ದೇವೆ. ಕರ್ನಾಟಕದಿಂದ ಕೇರಳಕ್ಕೆ ಸಹಾಯ ಮಾಡುತ್ತೇವೆ ಎಂದು ಹೇಳಿದ್ದಾರೆ.