ಮಂಗಳೂರು: ಸಿಸಿಬಿ ಪೊಲೀಸರಿಂದ ಇಬ್ಬರು ಗ್ಯಾಂಗ್ ಸ್ಟರ್ ಗಳ ಬಂಧನ, ಶಸ್ತ್ರಾಸ್ತ್ರ ವಶ
ಮಂಗಳೂರು: ನಗರದಲ್ಲಿ ಅಪರಾಧ ಕೃತ್ಯಕ್ಕೆ ಮುಂದಾಗಿದ್ದ ಮುಂದಾಗಿದ್ದ ಇಬ್ಬರು ಕುಖ್ಯಾತ ದರೋಡೆಕೋರರನ್ನು ಮಂಗಳೂರು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಅಕ್ರಮ ಪಿಸ್ತೂಲ್, ರಿವಾಲ್ವರ್, ಮದ್ದುಗುಂಡು ಮತ್ತು ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ವಿದೇಶದಲ್ಲಿ ತಲೆಮರೆಸಿಕೊಂಡಿರುವ ಗ್ಯಾಂಗ್ಸ್ಟರ್ ಕಲಿ ಯೋಗೀಶ್ನ ಇಬ್ಬರು ಸಹಚರರು ಅಕ್ರಮ ಶಸ್ತ್ರಾಸ್ತ್ರ ಮತ್ತು ಮಾದಕ ದ್ರವ್ಯಗಳೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿರುವುದಾಗಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದರು.
ಮೊಹಮ್ಮದ್ ಹನೀಫ್ (40), ಮೊಹಮ್ಮದ್ ರಫೀಕ್ ಬಂಧಿತ ಆರೋಪಿಗಳು. ಇವರಿಂದ ಒಂದು ಪಿಸ್ತೂಲ್, ಒಂದು ರಿವಾಲ್ವರ್, 12 ಸಜೀವ ಗುಂಡುಗಳು, 42 ಗ್ರಾಂ ಎಂಡಿಎಂಎ ಮಾದಕ ದ್ರವ್ಯ, ಒಂದು ಇನ್ನೋವಾ ಕಾರು, ಮೂರು ಮೊಬೈಲ್ ಫೋನ್ಗಳು ಮತ್ತು ಡಿಜಿಟಲ್ ತೂಕದ ಮಾಪಕವನ್ನು ವಶಪಡಿಸಿಕೊಳ್ಳಲಾಗಿದೆ.ಇವುಗಳ ಒಟ್ಟು ಮೌಲ್ಯ ರೂ. 10 ಲಕ್ಷ ಎಂದು ಅವರು ತಿಳಿಸಿದರು.
ಮಂಗಳೂರು ನಗರದ ಸಂಜೀವ ಶೆಟ್ಟಿ ಬಟ್ಟೆ ಅಂಗಡಿಯಲ್ಲಿ ನಡೆದ ಶೂಟೌಟ್, ಪುತ್ತೂರು ರಾಜಧಾನಿ ಜ್ಯುವೆಲ್ಲರಿ ಶೂಟೌಟ್, ಕೇರಳದ ಕಾಸರಗೋಡು ಜಿಲ್ಲೆಯ ಬೇವಿಂಜೆಯಲ್ಲಿ ಪಿಡಬ್ಲ್ಯುಡಿ ಗುತ್ತಿಗೆದಾರರೊಬ್ಬರ ಮನೆ ಮೇಲೆ ನಡೆದ ಶೂಟೌಟ್ ಸೇರಿದಂತೆ 14 ಪ್ರಕರಣಗಳಲ್ಲಿ ಹನೀಫ್ ಭಾಗಿಯಾಗಿದ್ದ. ಈತನ ವಿರುದ್ಧ ಮಂಗಳೂರು ಉತ್ತರ, ಬರ್ಕೆ, ಉಳ್ಳಾಲ, ಪುತ್ತೂರು ಪೇಟೆ ಪೊಲೀಸ್ ಠಾಣೆಗಳಲ್ಲಿ ವಾರೆಂಟ್ಗಳು ಬಾಕಿ ಇವೆ.
ರಫೀಕ್ ವಿರುದ್ಧ ಮಂಗಳೂರು ನಗರ ಮೂಲ್ಕಿ ಠಾಣೆಯಲ್ಲಿ ಕೊಲೆ ಯತ್ನ, ಬರ್ಕೆ ಠಾಣೆಯಲ್ಲಿ ಪೋಕ್ಸೋ ಪ್ರಕರಣ, ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ, ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದರೋಡೆಗೆ ಸಂಚು, ಕೊಣಾಜೆ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ, ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೇವಸ್ಥಾನ ಕಳವು ಪ್ರಕರಣ ಹಾಗೂ ಹಲ್ಲೆ ಪ್ರಕರಣ ದಾಖಲಾಗಿವೆ.
ಈತನ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಒಟ್ಟು ಒಂಬತ್ತು ಪ್ರಕರಣಗಳು ಹಾಗೂ ಕೇರಳದ ಮಂಜೇಶ್ವರ ಮತ್ತು ಕಣ್ಣೂರು ನಗರ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.