ಕೇಳುವವರಿಲ್ಲ ಕೂಡ್ಲೂರು ಗ್ರಾಮ ಪಂಚಾಯ್ತಿ ಗೋಳು:ಅಭಿವೃದ್ದಿಗೆ ಕುತ್ತಾದ ಅಧ್ಯಕ್ಷೆ ಸದಸ್ಯರ ನಡುವಿನ ಮನಸ್ತಾಪ…!
ಚಾಮರಾಜನಗರ :- ಗ್ರಾಮ ಪಂಚಾಯತ್ ಅಧ್ಯಕ್ಷೆ ಮತ್ತು ಸದಸ್ಯರ ನಡುವೆ ಮನಸ್ತಾಪದಿಂದಾಗಿ ಸಾಮಾನ್ಯ ಸಭೆ, ತುರ್ತು ಸಭೆ ನಡೆಯದೆ ಅಭಿವೃದ್ದಿ ಕೆಲಸ ಕಾರ್ಯಗಳು ಕುಂಠಿತಗೊಂಡಿದ್ದು, ಪಂಚಾಯ್ತಿ ನಿವಾಸಿಗಳು ಸಮಸ್ಯೆಗಳಿಂದ ಬಸವಳಿಯತೊಡಗಿರುವ ಪ್ರಸಂಗ ಚಾಮರಾಜನಗರ ತಾಲ್ಲೂಕಿನ ಕೂಡ್ಲೂರು ಗ್ರಾಮ ಪಂಚಾಯತ್ ನಲ್ಲಿ ನಡೆಯುತ್ತಿದೆ.
ಚಾಮರಾಜನಗರ ತಾಲ್ಲೂಕಿನ ಕೂಡ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಹೆಚ್.ಎನ್. ಗಗನ ಮಾದ್ಯಮ ದೊಂದಕ್ಕೆ ಹೇಳಿಕೆ ನೀಡಿ, ಹಲವಾರು ಭಾರಿ ಪಂಚಾಯತ್ ಸಾಮಾನ್ಯ ಸಭೆ, ಮತ್ತು ತುರ್ತು ಸಭೆ ಕರೆದರೆ ಪಂಚಾಯತ್ ಸದಸ್ಯರು ನಿರಾಸಕ್ತಿ ತೋರಿಸುತ್ತಿದ್ದಾರೆ. ಸಭೆಗೆ ಕೋರಂ ಇಲ್ಲದೆ ಸಭೆ ನಿರಂತರವಾಗಿ ಮುಂದೂಡಿಕೆ ಮಾಡುವ ಪರಿಸ್ಥಿತಿ ಬಂದಿದೆ. ಇದರಿಂದಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ದಿ ಕೆಲಸ ಕಾರ್ಯಗಳು ಕುಂಠಿತವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸದಸ್ಯರ ಸಹಕಾರದ ಕೊರತೆಯಿಂದಾಗಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಇದರ ಬಗ್ಗೆ ತಾನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳು ಮತ್ತು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿಗಳಿಗೆ ಲಿಖಿತವಾಗಿ ದೂರು ತಿಳಿಸಿದ್ದು, ಇದೂವರೆಗೂ ಹಿರಿಯ ಅಧಿಕಾರಿಗಳು ಗ್ರಾಮ ಪಂಚಾಯತ್ ಗೆ ಬೇಟಿ ನೀಡಿ, ಸಮಸ್ಯೆ ಬಗೆಹರಿಸಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಗ್ರಾಮಪಂಚಾಯತ್ ನಲ್ಲಿ ಯಾವುದೇ ಸಮರ್ಪಕವಾಗಿ ಅಭಿವೃದ್ದಿಕೆಲಸ ಕಾರ್ಯವಾಗಬೇಕಾದರೆ ಸದಸ್ಯರ ಸಹಕಾರದಿಂದ ನೆರವೇರಲಿದೆ. ಆದರೆ ಕೂಡ್ಲೂರು ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷೆ ಹಾಗೂ ಸದಸ್ಯರ ನಡುವಿನ ಮನಸ್ತಾಪದ ಬಿರುಕಿನಿಂದ ಕೂಡಿದ್ದು, ಬರೀ ನೌಕರರ ವೇತನ, ಸದಸ್ಯರ ಗೌರವ ಧನ , ಉದ್ಯೋಗ ಖಾತ್ರರಿಯಂತಹ ವೆಚ್ಚದ ಚಕ್ ಗಳಿಗೆ ಮಾತ್ರ ಸಹಿ ಹಾಕುವ ಪರಿಸ್ಥಿತಿಯಲ್ಲಿದ್ದಾರೆ ಅಧ್ಯಕ್ಷರು. ಇದನ್ನು ಬಿಟ್ಟು ಬೇರೇನು ಮಾಡುತ್ತಿಲ್ಲ ಎನ್ನುವ ಸಂಗತಿ ಬೆಳಕಿಗೆ ಬಂದಿದೆ.
ಮನಸ್ತಾಪ ಬಿಟ್ಟು, ಅಧ್ಯಕ್ಷರು ಮತ್ತು ಸದಸ್ಯರುಗಳು ಒಂದಾಗಿ ಗ್ರಾಮ ಪಂಚಾಯತ್ ಅಭಿವೃದ್ದಿಗೆ ಸಹಕರಿಸಬೇಕು, ಈ ಬಗ್ಗೆ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿರವರ ಗಮನಕ್ಕೆ ತಂದು ಎಲ್ಲಾ ಸದಸ್ಯರ ಸಭೆ ನಡೆಸಿ ಗ್ರಾಮಾಭಿವೃದ್ದಿಗೆ ಮುನ್ನಡಿಯಾಡಲು ವೇದಿಕೆ ಸಿದ್ದವಾಗಬೇಕಾಗಿದೆ ಎಂದು ಮಾಜಿ ಗ್ರಾಮ ಪಂಚಾಯತ್ ಸದಸ್ಯ ಮೂರ್ತಿ ಹೇಳುವರು.
ಕೂಡ್ಲೂರು ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷೆ ಹಾಗೂ ಸದಸ್ಯರ ಮುಸುಕಿನ ಗುದ್ದಾಟದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಸಿಬ್ಬಂದಿ ನೌಕರರು ಬಸವಳಿದು ಹೋಗಿದ್ದಾರೆ. ಇದಕ್ಕೆ ಮುಕ್ತಿ ಸಿಗುವುದು ಯಾವಾಗ ಎನ್ನುವುದು ಅಧ್ಯಕ್ಷೆ ಹಾಗೂ ಸದಸ್ಯರ ಮುಂದಿನ ನಡೆಯ ಮೇಲೆ ನಿಂತಿದೆ.