ಮುಸ್ಲಿಮರನ್ನು ಸಂತೃಪ್ತಿ ಪಡಿಸಲು ರಾಮನಗರ ಹೆಸರು ಬದಲಾವಣೆ: ಈಶ್ವರಪ್ಪ ಆರೋಪ
ಶಿವಮೊಗ್ಗ: ಇನ್ನು ಮೂರು ಉಪ ಚುನಾವಣೆ ಬರುತ್ತಿವೆ. ಮುಸ್ಲಿಮರನ್ನು ಸಂತೃಪ್ತಿ ಪಡಿಸಲು ರಾಮನಗರ ಹೆಸರು ಬದಲಾವಣೆ ಮಾಡುತ್ತಿದ್ದಾರೆ. ರಾಮ ಎನ್ನುವ ಹೆಸರಿದ್ದರೆ ನಿಮಗೆ ಏನು ಸಮಸ್ಯೆ? ಹಿಂದುತ್ವದ ಹೆಸರು ಬಂದರೆ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಗೆ ದೆವ್ವ ಬಂದಹಾಗೆ ಆಗುತ್ತದೆ. ರಾಮನಗರದ ಹೆಸರು ರಾಮನಗರ ಎಂದೇ ಇರಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಹಿಂದ ವರ್ಗಕ್ಕೆ ಓಟು ಕೊಡಿ ಒಳ್ಳೆಯ ಕೆಲಸ ಮಾಡುತ್ತೇವೆ ಎಂದರು. ಜನ ನಂಬಿ ಮತ ಹಾಕಿ ಗೆಲ್ಲಿಸಿದರು. ಆದರೆ ಹಿಂದುಳಿದ ವರ್ಗಕ್ಕೆ ಮೀಸಲಿಟ್ಟಿದ್ದ 312 ಕೋಟಿ ಹಣ ರದ್ದು ಮಾಡಿದ್ದಾರೆ. ಜುಲೈ 12 ರಂದು ಅನುದಾನ ವಾಪಸ್ ಪಡೆದಿದ್ದಾರೆ. ಎಸ್ ಸಿ ಎಸ್ ಟಿ ಹಣವನ್ನು ವಾಪಸ್ ತೆಗೆದುಕೊಂಡಿದ್ದರು. ಗ್ಯಾರಂಟಿ ಯೋಜನೆಗೆ ಬಳಸಿದ್ದಾರೋ ಯಾವುದಕ್ಕೆ ಬಳಸಿದ್ದಾರೋ ಗೊತ್ತಿಲ್ಲ. ಎಸ್ ಸಿ, ಎಸ್ ಟಿ ಹಾಗೂ ಹಿಂದುಳಿದ ವರ್ಗಕ್ಕೆ ಮೀಸಲಿಟ್ಟಿದ್ದ ಹಣವನ್ನು ಆ ಸಮುದಾಯಕ್ಕೆ ಕೊಡಬೇಕು. ಈ ಹಣ ವಾಪಸ್ ಕೊಟ್ಟರೆ ಆ ಸಮುದಾಯ ಉದ್ದಾರ ಆಗುತ್ತದೆ. ರಾಜಕಾರಣಕ್ಕೆ ಹೇಳಿಕೆ ಕೊಟ್ಟರೆ ಏನು ಪ್ರಯೋಜನ ಇಲ್ಲ. ಆ ಸಮುದಾಯಕ್ಕೆ ಹಣ ಕೊಡಬೇಕು ಎಂದರು.
ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ. ರೈತ ಸಂಪೂರ್ಣ ಸಂಕಷ್ಟದಲ್ಲಿದ್ದಾರೆ. ಬಿಜೆಪಿ ಮೇಲೆ ಆರೋಪ ಮಾಡುವುದರಲ್ಲೇ ನಿರತರಾಗಿದ್ದಾರೆ. ವಾಲ್ಮೀಕಿ ಹಗರಣದಲ್ಲಿ ಸಿಕ್ಕಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂಡಾ ಹಗರಣದಲ್ಲಿ ಸಿಲುಕಿದ್ದಾರೆ. 14 ಸೈಟ್ ಅನ್ನು ಸಿದ್ದರಾಮಯ್ಯ ಅವರ ಪತ್ನಿ ಹೆಸರಲ್ಲಿ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಲೋಕಸಭೆಯಲ್ಲಿ ಚರ್ಚೆಯಾಗಿದೆ.
ಮುಡಾ ಹಗರಣ, ವಾಲ್ಮೀಕಿ ಹಗರಣ, ಅಪೆಕ್ಸ್ ಬ್ಯಾಂಕ್ ಹಗರಣ, ಬೋವಿ ನಿಗಮದ ಹಗರಣದ ಬಗ್ಗೆ ಪ್ರತಿನಿತ್ಯ ಮಾಧ್ಯಮದಲ್ಲಿ ಬರುತ್ತಿದೆ. ಈ ಬಗ್ಗೆ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಉತ್ತರ ಕೊಡಲೇ ಇಲ್ಲ. ಯಾಕಂದರೆ ಎಲ್ಲರೂ ದಾಖಲೆ ಹಿಡಿದುಕೊಂಡಿದ್ದರು ಅದಕ್ಕೆ ಉತ್ತರ ಕೊಡಲಿಲ್ಲ ಎಂದರು.
ವಿಜಯೇಂದ್ರ ಹಗರಣ ಮಾಡಿದ್ದಾರೆ, ಅವರೊಬ್ಬ ಅಪ್ರಬುದ್ದ ರಾಜಕಾರಣಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ನಿಮ್ಮ ಬಳಿ ಸರಕಾರ ಇದೆ. ಎಸ್ಐಟಿ ಇದೆ. ನಿಮ್ಮ ಬಳಿ ದಾಖಲೆ ಇದ್ದರೆ ಬಿಜೆಪಿ, ಕಾಂಗ್ರೆಸ್ ಅವಧಿಯಲ್ಲಿ ನಡೆದ ಹಗರಣ ಎರಡನ್ನು ಸಿಬಿಐಗೆ ಕೊಡಿ. ಯಾರೇ ಹಗರಣ ಮಾಡಿದರೂ ಬಹಿರಂಗವಾಗಲಿ. ನಿಜಕ್ಕೂ ಇದು ನಿಮ್ಮ ಬ್ಯ್ಲಾಕ್ ಮೇಲ್ ತಂತ್ರ. ಯಾರೇ ಕಳ್ಳರಿದ್ದರೂ ಇವತ್ತಲ್ಲ ನಾಳೆ ಜೈಲಿಗೆ ಹೋಗಲೇಬೇಕು. ರಸ್ತೆಯಲ್ಲಿ ದಾಸರು ಮಾತನಾಡುವ ರೀತಿ ಭಂಡ ರೀತಿ ಹೇಳಿಕೆ ಕೊಡುವುದು ಬೇಡ ಎಂದು ಗುಡುಗಿದರು.
ಸಿಎಂ ಸಿದ್ದರಾಮಯ್ಯ 21 ಹಗರಣದ ಬಗ್ಗೆ ಪಟ್ಟಿ ಕೊಟ್ಟರು. ಎಲ್ಲವನ್ನು ಸಿಬಿಐಗೆ ಕೊಡಿ ಎಲ್ಲಾ ಸರ್ಕಾರದ ತನಿಖೆ ಆಗಲಿ. ನಮ್ಮ 40 ವರ್ಷದ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲ ಅಂತಾರೆ. ಯಾವುದೇ ಕಪ್ಪು ಚುಕ್ಕೆ ಇಲ್ಲ ಅಂದರೆ ಸಿಬಿಐಗೆ ವಹಿಸಿ. ಸಿದ್ದರಾಮಯ್ಯ ಚಿಂತನಶೀಲರನ್ನು ಇಟ್ಟುಕೊಂಡು ಹೋರಾಟ ಮಾಡುತ್ತೇವೆ ಎನ್ನುತ್ತಾರೆ. ಚಿಂತನಾಶೀಲರು ಕಾಂಗ್ರೆಸ್ ಚೇಲಾಗಳಾ, ಸಿದ್ದರಾಮಯ್ಯ ಚೇಲಾಗಳಾ? ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿದ್ದರೂ ಚಿಂತನಾಶೀಲರು ತುಟಿಕ್ ಪಿಟಿಕ್ ಅಂದಿಲ್ಲ. ಕಳ್ಳನ ಹೆಂಡ್ತಿ ಯಾವತ್ತಿದ್ದರೂ ಮುಂಡೆನೇ. ಮುಚ್ಚಿಡುವ ಪ್ರಯತ್ನ ಮಾಡಬೇಡಿ. ಎಲ್ಲವನ್ನೂ ತನಿಖೆ ಮಾಡಿಸಿ, ಎಲ್ಲಾ ಹಗರಣವನ್ನು ಸಿಬಿಐಗೆ ವಹಿಸಿ ಎಂದು ಈಶ್ವರಪ್ಪ ಆಗ್ರಹಿಸಿದರು.
ಬಡವರಿಗೆ ಆಶ್ರಯ ಮನೆ ಕೊಡುತ್ತೇವೆ ಎಂದರು. ಈ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಒಂದು ಮನೆ ಕೊಟ್ಟಿಲ್ಲ. ವಸತಿ ಸಚಿವ ಜಮೀರ್ ಅಹಮ್ಮದ್ ಭೇಟಿ ಮಾಡಲು ಅವರ ಕಚೇರಿಗೆ ಹೋಗಿದ್ದೆ. ಸಚಿವರ ಭೇಟಿ ಮಾಡಲು ಅವರೇ ಸಮಯ ಕೊಟ್ಟಿದ್ದರು ಸಮಯ ಕೊಟ್ಟಿದ್ದರೂ ಅಂತಾ ಕಚೇರಿಗೆ ಹೋಗಿದ್ದೆ. ಸಚಿವರು ಸಿಗಲಿಲ್ಲ, ವಿದೇಶಕ್ಕೆ ಹೋಗಿದ್ದಾರೆ ಎಂದರು. ಅವರೇ ಭೇಟಿಗೆ ಸಮಯ ಕೊಟ್ಟು ತಪ್ಪಿಸಿಕೊಂಡರು. ಆಶ್ರಯ ಮನೆ ನಿರ್ಮಾಣದ ಬಗ್ಗೆ ಗಮನ ಕೊಡಲಿಲ್ಲ. ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ಈಶ್ವರಪ್ಪ ಹೇಳಿದರು.
ಎರಡು ವರ್ಷದಿಂದ ಕಾರ್ಮಿಕ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಹಣ ಬಂದಿಲ್ಲ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಇದನ್ನು ಸರಿಪಡಿಸಲು ಭರವಸೆ ನೀಡಿದ್ದಾರೆ ಎಂದರು.