ಹಾಡಹಗಲೇ ಬೈಕ್ ಸವಾರನ ಮೇಲೆ ಎರಗಿದ ಚಿರತೆ
ಮೈಸೂರು: ಕಾಡಿನಿಂದ ನಾಡಿಗೆ ಬಂದ ಚಿರತೆ ಸಿಕ್ಕ ಸಿಕ್ಕವರ ಮೇಲೆ ದಾಳಿಗೆ ಯತ್ನಿಸಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್ ನಗರ ಪಟ್ಟಣದಲ್ಲಿ ನಡೆದಿದೆ. ಗುರುವಾರ ರಾತ್ರಿ ಕೆಲ ಕಾಲ ಜನರಿಗೆ ತೊಂದರೆ ಕೊಟ್ಟಿದ್ದ ಚಿರತೆ ಬೆಳಗ್ಗೆಯೂ ಪಟ್ಟಣದ ಒಳ ಭಾಗಕ್ಕೆ ಉಪಟಳ ನೀಡಿತು. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ.
ಮೈಸೂರು ಜಿಲ್ಲೆಯ ಕೆ.ಆರ್ ನಗರ ಪಟ್ಟಣದ ಜನ ನಿಜಕ್ಕೂ ಚಿರತೆಯ ಅಬ್ಬರ ಕಂಡು ಬೆಚ್ಚಿದ್ದರು. ಏಕೆಂದರೆ ದೊಡ್ಡ ಗಾತ್ರದ ಚಿರತೆ ಪಟ್ಟಣಕ್ಕೆ ಎಂಟ್ರಿ ಕೊಟ್ಟು ಜನರು ಓಡಾಡದಂತೆ ಮಾಡಿತ್ತು. ಕೆ.ಆರ್ ನಗರ ಪಟ್ಟಣದಿಂದ ಮುಳ್ಳೂರಿಗೆ ಹೋಗುವ ರಸ್ತೆಯಲ್ಲಿ ಚಿರತೆ ಮೊದಲು ಕಾಣಿಸಿಕೊಂಡಿತ್ತು. ರಸ್ತೆಯಲ್ಲೇ ಮಲಗಿದ್ದ ಚಿರತೆ ರಸ್ತೆಯಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ಸವಾರನ ಮೇಲೆ ದಾಳಿ ನಡೆಸಿದೆ. ರಾತ್ರಿಯಿಂದಲ್ಲೂ ಇದೇ ಮಾರ್ಗದ ಬಳಿ ಇದ್ದ ಚಿರತೆ ಬೆಳಗ್ಗೆ ಪಟ್ಟಣದ ಒಳಗಡೆ ಬಂದಿತ್ತು.
ಕೆ.ಆರ್. ನಗರ ಪಟ್ಟಣದ ಒಳ ಭಾಗಕ್ಕೆ ಬಂದ ಚಿರತೆ ಸಿಕ್ಕ ಸಿಕ್ಕ ಕಡೆ ಓಡಾಡ ತೊಡಗಿದೆ. ಜನ ಗಾಬರಿಯಿಂದ ಕೂಗುವಾಗ ಇನ್ನಷ್ಟು ಕಂಗಾಲಾದ ಚಿರತೆ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿದೆ. ಪಟ್ಟಣದ ಹಲವು ರಸ್ತೆಗಳಲ್ಲಿ ಚಿರತೆ ಓಡುತ್ತಾ ಅಬ್ಬರಿಸಿದೆ. ಚಿರತೆ ದಾಳಿಯಿಂದ ಇಬ್ಬರಿಗೆ ಗಾಯಗಳಾಗಿವೆ.
ಬೆಳಗ್ಗೆ ಚಿರತೆ ಪಟ್ಟಣಕ್ಕೆ ಎಂಟ್ರಿ ಕೊಟ್ಟ ವಿಚಾರ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿತು. ತುರ್ತಾಗಿ ಕಾರ್ಯಾಚರಣೆ ನಡೆಸಿ ಚಿರತೆಗೆ ಅರವಳಿಕೆ ನೀಡಿ ಚಿರತೆ ಸೆರೆ ಹಿಡಿಯುಂತೆ ಶಾಸಕ ಸಾರಾ ಮಹೇಶ್ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಆಗ ಕಾರ್ಯಾಚರಣೆ ಚುರುಕು ಗೊಳಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕೆಲ ತಾಸುಗಳಲ್ಲೆ ಚಿರತೆ ಸೆರೆ ಹಿಡಿದಿದ್ದಾರೆ. ಸೆರೆ ಹಿಡಿದ ಚಿರತೆಯನ್ನು ನಾಗರಹೊಳೆ ಅರಣ್ಯಕ್ಕೆ ಬಿಡಲಾಗಿದೆ.
ಹೆಣ್ಣು ಚಿರತೆ ಇದ್ದಾಗಿದ್ದು ವಯಸ್ಸಾಗಿದೆ. ಬೇಟೆಯಾಡಲು ಸಾಧ್ಯವಾಗದೆ ಸುಲಭವಾಗಿ ನಾಯಿಗಳ ಬೇಟೆಗೆ ಚಿರತೆ ಕೆ.ಆರ್. ನಗರ ಪಟ್ಟಣಕ್ಕೆ ಬಂದಿದೆ. ಚಿರತೆ ಬಹಳ ಬೇಗ ಸೆರೆ ಸಿಕ್ಕ ಕಾರಣ ಚಿರತೆಯಿಂದ ಇನ್ನಷ್ಟು ಜನರು ದಾಳಿಗೆ ಒಳಗಾಗುವುದು ತಪ್ಪಿದಂತಾಗಿದೆ