ಪೊಲೀಸರ ನಿರ್ಲಕ್ಷ್ಯದಿಂದ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿ ಯಜಮಾನ ಮೃತಪಟ್ಟು ಮೂವರು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು..!
ಕುಟುಂಬದ ಯುವತಿಯ ಖಾಸಗಿ ವಿಡಿಯೋವನ್ನು ಹರಿಯಬಿಡುವುದಾಗಿ ಬೆದರಿಸಿದ ಯುವಕನ ವಿರುದ್ಧ ದೂರು ನೀಡಿದರೂ ಕ್ಯಾರೆ ಅನ್ನದ ಕೆ.ಆರ್.ನಗರ ಪೊಲೀಸರು..!
ಚಾಮರಾಜನಗರ :- ಮೊಮ್ಮಗಳ ಖಾಸಗಿ ವೀಡಿಯೋ ಹರಿ ಬಿಡುತ್ತೇನೆಂಬ ಯುವಕನ ಬ್ಲಾಕ್ ಮೇಲ್ ಗೆ ಅಂಜಿದ ಕುಟುಂಬ ವಿಷ ಸೇವಿಸಿ ಓರ್ವ ಮೃತಪಟ್ಟ ಧಾರುಣ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ನಡೆದಿದೆ.ಹೇಳಿ-ಕೇಳಿ ಇದು ಮೊಬೈಲ್ ಯುಗ. ಅಪ್ರಾಪ್ತೆ ಜೊತೆ ಸಲುಗೆ ಬೆಳೆಸಿ ಆಕೆಯ ಖಾಸಗಿ ಕ್ಷಣ ಸೆರೆ ಹಿಡಿದ ಯುವಕನ ಕಾಮಚೇಷ್ಟೆಗೆ ಇಡೀ ಕುಟುಂಬವೇ ಈಗ ಕಣ್ಣೀರಲ್ಲಿ ಮುಳುಗಿದೆ. ಪಾಪಿಯ ಕೃತ್ಯಕ್ಕೆ ಹೆದರಿ ಪುಣ್ಯಭೂಮಿಯಲ್ಲಿ ಕ್ರಿಮಿನಾಶಕ ಸೇವಿಸಿ ಕುಟುಂಬದ ಮೂವರು ನರಳಾಡುತ್ತಿದ್ದರೇ ಮನೆ ಯಜಮಾನ ಅಸುನೀಗಿದ್ದಾರೆ.
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚಂದಗಾಲು ಗ್ರಾಮದ ಮಹಾದೇವನಾಯಕ ಮೃತಪಟ್ಟರೇ ಇವರ ಪತ್ನಿ ಗೌರಮ್ಮ, ಮಗಳು ಲೀಲಾವತಿ, ಮೊಮ್ಮಗಳು ರಿಷಿಕಾ ಸಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಮಹದೇವನಾಯಕರ ಮೊಮ್ಮಗಳು ರಿಷಿಕಾ ದ್ವಿತೀಯ ಪಿಯು ವಿದ್ಯಾರ್ಥಿನಿಯಾಗಿದ್ದು ಚೀರನಹಳ್ಳಿ ಗ್ರಾಮದ ಲೋಕೇಶ್ ಜೊತೆ ಸ್ನೇಹವಿತ್ತು. ಸ್ನೇಹವನ್ನೇ ಬಂಡವಾಳ ಮಾಡಿಕೊಂಡು ಸಲುಗೆ ಬೆಳೆಸಿಕೊಂಡ ಯುವಕ ಅಪ್ರಾಪ್ತೆಯನ್ನು ಚುಂಚನಕಟ್ಟೆಗೆ ಕರೆದೊಯ್ದು ಖಾಸಗಿ ವೀಡಿಯೋ ಸೆರೆ ಹಿಡಿದಿದ್ದ. ಬಳಿಕ, ತಾನು ಹೇಳದಿದ್ದನ್ನು ಕೇಳದಿದ್ದರೇ ವೀಡಿಯೋ ಹರಿ ಬಿಡುವುದಾಗಿ ಹುಡುಗಿ ಮನೆಗೇ ಬಂದು ಹೆದರಿಸಿದ್ದ.ಯುವಕನ ಅಟಾಟೋಪಕ್ಕೆ ಬೇಸತ್ತ ಮಹಾದೇವನಾಯಕ ಕುಟುಂಬ ಕೆ.ಆರ್.ನಗರ ಪೊಲೀಸರಿಗೆ ದೂರು ಕೊಟ್ಟರೂ ಯಾವುದೇ ಕ್ರಮ ವಹಿಸದ ಆರೋಪ ಕೇಳಿಬಂದಿದೆ.
ಪೊಲೀಸರು ಯಾವುದೇ ಕ್ರಮ ವಹಿಸದಿದ್ದದು, ವೀಡಿಯೋ ಹರಿಬಿಡುವ ಆತಂಕ ಎದುರಾಗಿ ಮಾನಕ್ಕೆ ಹೆದರಿದ ಕುಟುಂಬ ಶುಕ್ರವಾರ ಮಧ್ಯಾಹ್ನವೇ ಮಲೆ ಮಹದೇಶ್ವರ ಬೆಟ್ಟದತ್ತ ಬಂದಿದ್ದಾರೆ. ಮಾದಪ್ಪನ ಬೆಟ್ಟದ ತಪ್ಪಲಾದ ತಾಳುಬೆಟ್ಟದಲ್ಲಿ ಕಾಡಿನಹಾದಿಯಲ್ಲಿ ನಾಲ್ವರು ಕ್ರಿಮಿನಾಶಕ ಸೇವಿಸಿ, ಮಹಾದೇವನಾಯಕ ಮೃತಪಟ್ಟಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿ ಸಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಸಂಬಂಧ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಯುವಕನ ಕಾಮಚೇಷ್ಠೆಗೆ ಈಗಲಾದರೂ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಕುಟುಂಬಕ್ಕೆ ನ್ಯಾಯ ಕೊಡಿಸುತ್ತಾರಾ ಕಾದು ನೋಡಬೇಕಿದೆ.