ಕ್ಲಬ್ ಗಳ ಹೆಸರಿನಲ್ಲಿ ಅಂದರ್ ಬಹಾರ್ ಆಟ…!!
ಮಂಗಳೂರು :- ನಗರದ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ತಣ್ಣನೆ ಮಲಗಿದ್ದ ಜುಗಾರಿ ಅಡ್ಡೆಗಳು ಮತ್ತೆ ತಲೆ ಎತ್ತಿ ರಾಜಾರೋಷವಾಗಿ ಕಾರ್ಯಾಚರಣೆಗೆ ಇಳಿದಿದ್ದು ನಗರಕ್ಕೆ ಕಪ್ಪು ಚುಕ್ಕೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ರಿಕ್ರಿಯೇಷನ್ ಕ್ಲಬ್ ಗಳ ಹೆಸರಿನಲ್ಲಿ ಪರವಾನಿಗೆ ತೆಗೆದು ಕೊಂಡು ನಂತರ ಅಲ್ಲಿ ಅಂದರ್ ಬಾಹರ್ ಆಟ ನಡೆಸುತ್ತಿದ್ದಾರೆ. ಇದರಲ್ಲಿ ಕೆಲವು ಗೆದ್ದರೆ, ಹೆಚ್ಚಿನ ಜನ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಾರೆ.ಮಧ್ಯಮವರ್ಗ ಹಾಗೂ ಬಡ ಕೂಲಿಕಾರ್ಮಿಕರು ಈ ಜುಗಾರಿ ಅಡ್ಡೆಯ ಖಾಯಂ ಗ್ರಾಹಕರು, ತಾವು ದಿನನಿತ್ಯ ಸಂಪಾದಿಸಿದ ದುಡಿದ ಹಣವನ್ನು ಜುಗಾರಿ ಅಡ್ಡೆಗೆ ತೊಡಗಿಸಿ ಕುಟುಂಬವನ್ನು ಬೀದಿಪಾಲು ಮಾಡುತ್ತಿದ್ದಾರೆ ಅನ್ನುವ ಆರೋಪ ಇದೀಗ ಕೇಳಿ ಬರುತ್ತಿದೆ. ಕೆಲವು ಸಮಯಗಳಿಂದ ಬಾಗಿಲು ಮುಚ್ಚಿದ್ದ ಜುಗಾರಿ ಅಡ್ಡೆಗಳು ಮತ್ತೆ ತಲೆ ಎತ್ತಿದ್ದು, ಸಣ್ಣ ವ್ಯಾಪಾರಿಗಳು, ಬಡ ಮಧ್ಯಮ ವರ್ಗದ ಕೂಲಿ ಕಾರ್ಮಿಕರನ್ನು ಟಾರ್ಗೆಟ್ ಮಾಡಿಕೊಂಡು ಹಣ ದೋಚುವ ದಂಧೆಗೆ ಇಳಿದಿದೆ. ಇವರ ಮೋಸದಾಟಕ್ಕೆ ಬಹಳಷ್ಟು ಕುಟುಂಬಗಳು ತಮ್ಮ ಮನೆ, ಮಠ ಅಮೂಲ್ಯ ಸೊತ್ತುಗಳನ್ನು ಕಳೆದುಕೊಂಡು ಬೀದಿಗೆ ಬೀಳುವಂತಾಗಿದೆ. ನಗರದ ಹೃದಯ ಭಾಗದಲ್ಲಿ ಇಂತಹ ಹಲವಾರು ಜೂಜು ಕೇಂದ್ರಗಳು ಇದೀಗ ಯಾರ ಭಯವಿಲ್ಲದೆ ಕಾರ್ಯಾಚರಿಸುತ್ತಿದೆ.ಮಂಗಳೂರಿಗೆ ಆಗಮಿಸಿದ್ದ ಕಮೀಷನರ್ ಇಂತಹ ದಂಧೆಗಳ ಬಾಗಿಲು ಮುಚ್ಚಿಸಿ ಶ್ಲಾಘನೆಗೆ ಪಾತ್ರವಾಗಿದ್ದರು. ಇದೀಗ ಮತ್ತೆ ಅಲ್ಲಲ್ಲಿ ನಾಯಿಕೊಡೆಗಳಂತೆ ಮತ್ತೆ ಬಾಗಿಲು ತೆರೆದು ದಂಧೆ ಆರಂಭಿಸಿದ್ದು ಇದರ ಹಿಂದೆ ಯಾರಿದ್ದಾರೆ ಅನ್ನುವುದು ನಿಗೂಢವಾಗಿದೆ. ಸಾರ್ವಜನಿಕರು, ಪ್ರಜ್ಞಾವಂತ ಸಂಘಟನೆಗಳು ಈ ಬಗ್ಗೆ ಧ್ವನಿ ಎತ್ತಿದ ಪರಿಣಾಮ ಕೆಲವು ಕಾಲ ತಮ್ಮ ಅಕ್ರಮ ದಂಧೆಗೆ ಬೀಗ ಬಿದ್ದಿತ್ತು. ಪೊಲೀಸ್ ಇಲಾಖೆ ಕೆಲವೊಮ್ಮೆ ತೋರಿಕೆಗಷ್ಟೇ ಬಂದ್ ನಾಟಕವಾಡಿ, ಮತ್ತೆ ಕೆಲವು ದಿನಗಳ ನಂತರ ಯಥಾ ಸ್ಥಿತಿಯಾಗಿ ಅಡ್ಡೆ ಪ್ರಾರಂಭವಾಗುತ್ತದೆ.ಇದೀಗ ಮತ್ತೆ ತಲೆ ಎತ್ತಿರುವ ಜೂಜು ಕೇಂದ್ರಗಳನ್ನು ಶಾಶ್ವತವಾಗಿ ಬಂದ್ ಮಾಡಿ ನಗರದ ಸ್ವಾಸ್ಥ್ಯ ಉಳಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ವಿವಿಧ ಆಮಿಷ ತೋರಿಸಿ ಕೂಲಿ ಕಾರ್ಮಿಕರು ಮತ್ತೆ ಈ ದಂಧೆಯತ್ತ ಮುಖ ಮಾಡಿ ತನ್ನ ದುಡಿಮೆಯ ಹಣವನ್ನು ಧೋ ನಂಬರ್ ದಂಧೆಕೋರರು ದೋಚುತ್ತಿದ್ದಾರೆ. ಒಂದೆಡೆ ಸರಕಾರ ಗ್ಯಾರಂಟಿ ಯೋಜನೆ ಮೂಲಕ ಕುಟುಂಬವನ್ನು ಸ್ವಾವಲಂಬಿ ಮಾಡುವ ಕೆಲಸಕ್ಕೆ ತೊಡಗಿದರೆ, ಇದನ್ನು ಅಣಕಿಸುವಂತೆ ಜೂಜು ಕೇಂದ್ರಗಳು ಮಧ್ಯಮ ವರ್ಗ, ಬಡವರನ್ನು ಟಾರ್ಗೆಟ್ ಮಾಡಿಕೊಂಡು ತಮ್ಮ ದುಡಿಮೆಯ ಹಣವನ್ನು ಜೂಜು ಕೇಂದ್ರಕ್ಕೆ ಹಾಕಿ ಎಲ್ಲವನ್ನೂ ಕಳೆದುಕೊಂಡು ಬೀದಿ ಪಾಲಾಗುತ್ತಿದ್ದಾರೆಮಾನ್ಯ ಪೊಲೀಸ್ ಆಯುಕ್ತರು ಜೂಜು ಅಡ್ಡೆಗೆ ಶಾಶ್ವತ ಬಾಗಿಲು ಹಾಕುವ ಕೆಲಸಕ್ಕೆ ಮುಂದಾಗಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.