ಡಿಸಿಎಂ ಡಿಕೆಶಿ ಅವರಿಂದ ಸರ್ವಪಕ್ಷಗಳ ಸಭೆ : ಜೂನ್ 05
ಬೆಂಗಳೂರು, ಜೂನ್ 02; ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪೂರ್ಣ ಬಹುಮತ ಪಡೆದು ಸರ್ಕಾರ ರಚನೆ ಮಾಡಿದೆ.ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ. ಕೆ. ಶಿವಕುಮಾರ್ ಸರ್ಕಾರ ಮುನ್ನಡೆಸುತ್ತಿದ್ದಾರೆ. ವಿರೋಧ ಪಕ್ಷಗಳು ಹೊಸ ಸರ್ಕಾರಕ್ಕೆ ಹಲವು ಸಲಹೆಗಳನ್ನು ನೀಡುತ್ತಿವೆ.
ರಾಜ್ಯದ ರಾಜಧಾನಿ ಬೆಂಗಳೂರು ನಗರ ವಿಶ್ವಮಟ್ಟದಲ್ಲಿ ಗಮನ ಸೆಳೆದಿದೆ. ಇಲ್ಲಿ ಸಮಸ್ಯೆಗಳೂ ಸಹ ಸಾಕಷ್ಟಿವೆ. ಈ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರಕ್ಕೆ ಇತರ ಪಕ್ಷಗಳ ಸಹಾಯ ಸಹ ಬೇಕಾಗುತ್ತದೆ. ಸರ್ಕಾರದ ನಡೆಗೆ ಟೀಕೆ ಮಾಡುವುದು ಬಿಟ್ಟು ನಗರದ ಅಭಿವೃದ್ಧಿಗೆ ವಿಪಕ್ಷಗಳು ಸಲಹೆ ನೀಡಬಹುದು.
ಇದಕ್ಕಾಗಿ ಉಪ ಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ. ಕೆ. ಶಿವಕುಮಾರ್ ಜೂನ್ 5ರ ಸೋಮವಾರ ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ಬೆಂಗಳೂರು ನಗರದ ಅಭಿವೃದ್ಧಿ ಕುರಿತು ವಿರೋಧ ಪಕ್ಷಗಳ ಸಲಹೆಗಳನ್ನು ಪಡೆಯಲು ಈ ಸಭೆಯನ್ನು ಕರೆಯಲಾಗಿದೆ. ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ.
ಅನುಭವಿ ನಾಯಕರು ಇದ್ದಾರೆ; ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಅನುಭವಿ ನಾಯಕರು ಇದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಮಾಜಿ ಸಚಿವ ಆರ್. ಅಶೋಕ, ಡಾ. ಸಿ. ಎನ್. ಅಶ್ವಥ್ ನಾರಾಯಣ ಬೆಂಗಳೂರು ನಗರದ ಶಾಸಕರು ನಗರದ ಬಗ್ಗೆ ಅಪಾರವಾದ ಜ್ಞಾನ ಹೊಂದಿದ್ದಾರೆ. ನಗರದ ಸಮಸ್ಯೆಗಳ ಕುರಿತು ಅವರಿಗೆ ಚೆನ್ನಾಗಿ ಅರಿವಿದೆ.
ಬೆಂಗಳೂರು ನಗರದಲ್ಲಿ ಜೆಡಿಎಸ್‌ನ ಯಾವುದೇ ಶಾಸಕರು ಗೆದ್ದಿಲ್ಲ. ಆದರೆ ಎಚ್. ಡಿ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಗಳು. ನಗರದ ಸಮಸ್ಯೆಗಳು ಅವರಿಗೆ ಚೆನ್ನಾಗಿ ಗೊತ್ತು, ಅಭಿವೃದ್ಧಿ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಆದ್ದರಿಂದ ಡಿ. ಕೆ. ಶಿವಕುಮಾರ್ ಸರ್ವಪಕ್ಷಗಳ ಸಭೆ ಕರೆದಿದ್ದಾರೆ.