ಅಂತ್ಯಸಂಸ್ಕಾರಕ್ಕೆ ಅಡ್ಡಿ: ಜಮೀನು ಮಾಲೀಕರ ಮನವೊಲಿಸುವಲ್ಲಿ ಯಶಸ್ವಿಯಾದ ಹಿಂದುಳಿದ ವರ್ಗ ಇಲಾಖೆ ಅಧಿಕಾರಿಗಳು
ಜಮೀನು ಮಾಲೀಕರು ಶವ ಮುಚ್ಚಲು ಅಡ್ಡಿ ಪಡಿಸಿದ ಬೆನ್ನಲ್ಲೇ ಮೃತನ ಕುಟುಂಬಸ್ಥರು ಶವವನ್ನು ವಾಪಸ್ ತೆಗೆದುಕೊಂಡು ಹೋಗದೆ, ಅದೇ ಸ್ಥಳದಲ್ಲೇ ಅಂತ್ಯ ಸಂಸ್ಕಾರ ಮಾಡಲು ಪಟ್ಟು ಹಿಡಿದಿದ್ದಾರೆ. ಇದ್ರಿಂದ ಸುಮಾರು ನಾಲ್ಕು ಗಂಟೆಗಳ ಕಾಲ ಶವಸಂಸ್ಕಾರದ ವಿಚಾರ ಹಗ್ಗಜಗ್ಗಾಟ ನಡೆದಿದೆ.
ಅಂತ್ಯಸಂಸ್ಕಾರಕ್ಕ ಅಡ್ಡಿ: ಜಮೀನು ಮಾಲೀಕರ ಮನವೊಲಿಸುವಲ್ಲಿ ಯಶಸ್ವಿಯಾದ ಹಿಂದುಳಿದ ವರ್ಗ ಇಲಾಖೆ ಅಧಿಕಾರಿಗಳು
ದಲಿತ ವ್ಯಕ್ತಿ ಅಂತ್ಯಸಂಸ್ಕಾರ ಅಡ್ಡಿ ಪಡಿಸಿರುವ ಘಟನೆಯೊಂದು ತುಮಕೂರಿನಲ್ಲಿ ನಡೆದಿದೆ. ವಿವಾದಿತ ಜಮೀನಿನಲ್ಲಿ ಅಂತ್ಯಸಂಸ್ಕಾರಕ್ಕೆ ಮುಂದಾಗ ಜಮೀನು ಮಾಲೀಕ ಶವಸಂಸ್ಕಾರಕ್ಕೆ ತಡೆಯೊಡ್ಡಿದ್ದಾರೆ. ಸುಮಾರು ನಾಲ್ಕು ಗಂಟೆ ಗಳ ಬಳಿಕ ಎಸ್ಸಿ ಎಸ್ಟಿ ಸೆಲ್ ಅಧಿಕಾರಿಗಳ ಮಧ್ಯ ಪ್ರವೇಶದ ಬಳಿಕ ಅಂತ್ಯಸಂಸ್ಕಾರ ನಡೆದಿದೆ. ಏನಿದು ದಲಿತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಅಡ್ಡಿ ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ.
ವಿವಾದಿತ ಜಾಗದಲ್ಲಿ ಅಂತ್ಯಸಂಸ್ಕಾರಕ್ಕೆ ಮುಂದಾದ ದಲಿತ ಕುಟುಂಬಕ್ಕೆ ಅಡ್ಡಿಪಡಿಸಿ, ಶವ ಮುಚ್ಚಲು ತೆಗೆದಿದ್ದ ಗುಂಡಿಯನ್ನು ಮುಚ್ಚಿಸಿದ ಘಟನೆ ತುಮಕೂರು ಹೊರವಲಯ ಭೀಮಸಂದ್ರ ಗ್ರಾಮದಲ್ಲಿ ನಡೆದಿದೆ. ಗ್ರಾಮದ 50 ವರ್ಷದ, ದಲಿತ ಸಮುದಾಯಕ್ಕೆ ಸೇರಿದ ಮಂಜುನಾಥ್ ಎಂಬುವರು ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದರು. ಸಹಜವಾಗಿ ಗ್ರಾಮದ ಹೊರವಲಯದಲ್ಲಿ ಇರುವ ಜಾಗದಲ್ಲಿ ಮಣ್ಣು ಮಾಡಲು ಶವವನ್ನು ಸ್ಥಳಕ್ಕೆ ತಂದಿದ್ದಾರೆ. ಆಗ ಸ್ಥಳಕ್ಕಾಗಮಿಸಿದ ಜಮೀನು ಮಾಲೀಕರಾದ ಸೌಭಾಗ್ಯ ಕುಟುಂಬದ ಸದಸ್ಯರು ಪೊಲೀಸರೊಂದಿಗೆ ಆಗಮಿಸಿ ಶವ ಹೂಳಲು ತೆಗೆದಿದ್ದ ಗುಂಡಿಯನ್ನು ಮುಚ್ಚಿಸಿದ್ದಾರೆ. ಅಲ್ಲದೆ ಶವ ಹೂಳದಂತೆ ತಡೆದಿದ್ದಾರೆ.
ಜಮೀನು ಮಾಲೀಕರು ಶವ ಮುಚ್ಚಲು ಅಡ್ಡಿ ಪಡಿಸಿದ ಬೆನ್ನಲ್ಲೇ ಮೃತನ ಕುಟುಂಬಸ್ಥರು ಶವವನ್ನು ವಾಪಸ್ ತೆಗೆದುಕೊಂಡು ಹೋಗದೆ, ಅದೇ ಸ್ಥಳದಲ್ಲೇ ಅಂತ್ಯ ಸಂಸ್ಕಾರ ಮಾಡಲು ಪಟ್ಟು ಹಿಡಿದಿದ್ದಾರೆ. ಇದ್ರಿಂದ ಸುಮಾರು ನಾಲ್ಕು ಗಂಟೆಗಳ ಕಾಲ ಶವಸಂಸ್ಕಾರದ ವಿಚಾರ ಹಗ್ಗಜಗ್ಗಾಟ ನಡೆದಿದೆ. ಭೀಮಸಂದ್ರ ಗ್ರಾಮದ ಈ ಜಾಗ ದಲಿತ ಸಮುದಾಯಕ್ಕೆ ಸೇರಿದ್ದು, 1985ರಲ್ಲಿ ಈ ಜಾಗವನ್ನು ಅಂದಿನ ತಹಶೀಲ್ದಾರ್ ಮುಸ್ಲಿಂ ಸಮುದಾಯದ ವ್ಯಕ್ತಿಯೋರ್ವರಿಗೆ ಮರು ಮಂಜೂರು ಮಾಡಿದ್ದಾರೆ. ಇದಾದ ಬಳಿಕ ಸೌಭಾಗ್ಯ ತಂದೆ ವೀರಪ್ಪ ಈ ಜಮೀನು ಖರೀದಿದ್ದಾರೆ.
ವೀರಪ್ಪ ಖರೀದಿಸಿರುವ ಜಾಗದಲ್ಲೇ ದಲಿತ ಸಮುದಾಯದವರು ಹಲವು ವರ್ಷಗಳಿಂದ ಶವಸಂಸ್ಕಾರ ಮಾಡಿಕೊಂಡು ಬಂದಿದ್ದಾರೆ. ಎರಡು ವಾರದ ಹಿಂದೆ ಇದೇ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಹೀಗಾಗಿ ಇದು ದಲಿತರಿಗೆ ಸ್ಮಶಾನ ಮಾಡಲು ಅವಕಾಶ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಆದರೆ ಜಮೀನು ಮಾಲೀಕರು ಇದಕ್ಕೆ ಅವಕಾಶ ನೀಡಿಲ್ಲ. ಕೊನೆಗೆ ಎಸ್.ಸಿ. ಎಸ್.ಟಿ ಸೆಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಡುವಂತೆ ಜಮೀನು ಮಾಲೀಕರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿದಿದ್ದು, ಅಂತ್ಯಸಂಸ್ಕಾರ ನೆರವೇರಿದೆ. ಆದ್ರೆ ಈ ಸಮಸ್ಯೆ ಇಷ್ಟಕ್ಕೆ ಸುಮ್ಮನಾಗುವುದಿಲ್ಲ ಎಂಬುದು ಸ್ಥಳೀಯರ ಅಭಿಮತವಾಗಿದೆ.