ಸುಳ್ಯ ನ್ಯಾಯಾಲಯದಲ್ಲಿ ಒಂದೇ ದಿನ ನಾಲ್ಕು ಬೇರೆ ಬೇರೆ ಪ್ರಕರಣ ಗಳಲ್ಲಿ ಆರೋಪಿಗಳಿಗೆ ಶಿಕ್ಷೆ
ಸುಳ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಒಂದೇ ದಿನ ಆಭಿಯೋಜನೆ ಪರ ತೀರ್ಪು ನೀಡಿದ ನ್ಯಾಯಾಧೀಶರು
ಸುಳ್ಯ ನ್ಯಾಯಾಲಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಒಂದೇ ದಿನ ನಾಲ್ಕು ಪ್ರಕರಣಗಳಲ್ಲಿ ಆರೊಪಿಗಳಿಗೆ ಶಿಕ್ಷೆ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಪ್ರಕರಣ:1
ಈ ಪ್ರಕರಣದಲ್ಲಿ ಕೊಡಿಯಾಲ ಗ್ರಾಮದ ಕಲ್ಪಡಬೈಲು ಪಟ್ಟೆ ಎಂಬಲ್ಲಿಯ ರಾಧಾಕಷ್ಣ ರೈ ಎಂಬವರು ತನ್ನ ಮನೆಯಲ್ಲಿ ಅಕ್ರಮವಾಗಿ ಮದ್ಯದ ಬಾಟಲಿ ಗಳನ್ನು ಇರಿಸಿಕೊಂಡು ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಶೇಖರಿಸಿ ಇಟ್ಟುಕೊಂಡಿದ್ದಾರೆ ಎಂಬುದಾಗಿ ಆಗಿನ ಪೋಲಿಸ್ ಉಪ ನಿರೀಕ್ಷಕ ಚಂದ್ರಶೇಖರ್ ಹೆಚ್ .ವಿ ರವರು 2016 ಫೆ.24 ರಂದು ತನ್ನ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಆಗಿನ ಪೊಲೀಸ್ ಅಧಿಕಾರಿ ಜನಾರ್ದನ ಕೆ.ಎಂ ರವರು ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಸುಳ್ಯದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಸೋಮಶೇಖರ್ ಅವರು ಆರೋಪಿಯ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 2 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ರೂಪಾಯಿ ಹತ್ತು ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣ 2
ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಅರಂಬೂರು ಎಂಬಲ್ಲಿ ಮಾಣಿ ಮೈಸೂರು ಹೆದ್ದಾರಿಯಲ್ಲಿ 12.8.2019 ರಂದು ದುಡುಕುತನ ಹಾಗೂ ಅಜಾಗರೂಕತೆಯಿಂದ ತನ್ನ ಜೀಪನ್ನು ಚಲಾಯಿಸಿ ಸುಳ್ಯ ಕಡೆಯಿಂದ ಸಂಪಾಜೆ ಕಡೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ನಿವೃತ್ತ ಎ.ಎಸ್.ಐ. ಅಣ್ಣಯ್ಯ ಗೌಡ ಅವರ ಸಾವಿಗೆ ಕಾರಣರಾಗಿದ್ದಾರೆಂದು ಸುಳ್ಯ ಪರಿವಾರಕಾನ ನಿವಾಸಿ ಹಮ್ಜಾ ಎಂಬವರ ಮೇಲೆ ಆಗಿನ ಸುಳ್ಯ ಎಸ್.ಐ. ಹರೀಶ್ ಯಮ್.ಆರ್. ರವರು ಎಫ್.ಐ.ಆರ್. ದಾಖಲಿಸಿಕೊಂಡಿದ್ದರು.
ಆಗಿನ ವೃತ್ತ ನಿರೀಕ್ಷಕರಾದ ಸತೀಶ್ ಕುಮಾರ್ ಆರ್ ಆರೋಪಿಯ ವಿರುಧ್ದ ದೋಷಾರೋಪಣಾ ಪಟ್ಟಿ ಯನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹಿರಿಯ ನ್ಯಾಯಾಧೀಶರಾದ ಸೋಮಶೇಖರ್ ಅವರು ಆರೋಪಿಯ ಮೇಲಿನ ಆರೋಪ ಸಾಬೀತಾಗಿದೆ ಎಂದು ಹೇಳಿ ಆರೋಪಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣ 3 :
ಈ ಪ್ರಕರಣದಲ್ಲಿ ಆರೋಪಿಯಾಗಿರುವ ಕೇರಳದ ಆಲಪ್ಪುಯ ನಿವಾಸಿ ನಿಶಾದ್ ಅವರು ಕಂಟೈನರ್ ಲಾರಿ ಚಾಲಕರಾಗಿದ್ದು , 2.5.2016 ರಂದು ಮಾಣಿ ಮೈಸೂರು ಹೆದ್ದಾರಿಯಲ್ಲಿ ಸಂಪಾಜೆ ಗ್ರಾಮದ ದೊಡ್ಡಡ್ಕ ಎಂಬಲ್ಲಿ ಅತಿ ವೇಗ ಮತ್ತು ನಿರ್ಲಕ್ಷದಿಂದ ವಾಹನವನ್ನು ಚಲಾಯಿಸಿ ಸಂಪಾಜೆ ಕಡೆಯಿಂದ ಬರುತ್ತಿದ್ದ ಮಾರುತಿ ಓಮ್ನಿ ಕಾರಿಗೆ ಢಿಕ್ಕಿ ಪಡಿಸಿ ಮಾರುತಿ ಕಾರಿನಲ್ಲಿ ಚಾಲಕರಾಗಿದ್ದ ಯೂಸುಫ್ ಮತ್ತು ಎದುರು ಸೀಟಿನಲ್ಲಿ ಕುಳಿತಿದ್ದ ಮಕ್ಬೂಲ್ ಎಂಬವರು ಸ್ಥಳದಲ್ಲಿಯೇ ಮೃತಪಡಲು ಹಾಗೂ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಜುಲೇಕ ಅವರು ಚಿಕಿತ್ಸೆ ಫಲಕಾರಿಯಾಗದೆ ನಂತರ ಮೃತ ಪಡಲು ಕಾರಣರಾಗಿದ್ದಾರೆಂದೂ, ಮಗ ಸಲೀಂ ಗಂಭೀರ ಗಾಯಗೊಂಡಿರುವುದಾಗಿಯೂ ಅಂದಿನ ಸುಳ್ಯ ವೃತ್ತ ನಿರೀಕ್ಷಕರಾದ ವಿ ಕೃಷ್ಣಯ್ಯ ಅವರು ಆರೋಪಿಯ ವಿರುದ್ಧ ಚಾರ್ಜ್ ಶೀಟ್ ಹಾಕಿದ್ದರು. ವಿಚಾರಣೆ ನಡೆಸಿದ ಸುಳ್ಯ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಸೋಮಶೇಖರ್ ಅವರು ಆರೋಪಿಯ ವಿರುದ್ಧ ಹೊರಿಸಿರುವ ಆರೋಪವು ಸಾಬೀತಾಗಿದೆ ಎಂದು ಹೇಳಿ ಆರೋಪಿಗೆ 2 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣ: 4
ಈ ಪ್ರಕರಣದಲ್ಲಿ ಆರೋಪಿ ಆಲೆಟ್ಟಿ ಬಡ್ಡಡ್ಕದ ಅಶಿಸ್ ಕುಮಾರ್ ಎಂಬವರು 27.11.2017 ರಂದು ಸುಳ್ಯ ಮೀನು ಮಾರುಕಟ್ಟೆ ಬಳಿ ತನ್ನ ಟಿಪ್ಪರ್ ಲಾರಿಯನ್ನು ಅಜಾಗರೂಕತೆ ಮತ್ತು ನಿರ್ಲಕ್ಷ್ಯ ದಿಂದ ಚಲಾಯಿಸಿ ಸ್ಕೂಟರ್ ಸವಾರ ಮಂಡೆಕೋಲು ಗ್ರಾಮದ ಪೇರಾಲಿನ ಅವಿನ್ ಸ್ಥಳದಲ್ಲೇ ಮೃತಪಡಲು ಕಾರಣ ರಾಗಿದ್ದಾರೆಂದೂ ಈ ಸಂದರ್ಭದಲ್ಲಿ ಆರೋಪಿಯು ಟಿಪ್ಪರ್ ಲಾರಿಯನ್ನು ಸ್ಥಳದಲ್ಲೇ ನಿಲ್ಲಿಸಿ ಸ್ಕೂಟರ್ ಸವಾರ ಆವಿನ್ ಅವರನ್ನು ಉಪಚರಿಸದೆ , ಪೋಲಿಸ್ ಠಾಣೆಗೂ ಮಾಹಿತಿ ನೀಡದೆ ಟಿಪ್ಪರ್ ಲಾರಿಯ ವಿಮಾ ಅವಧಿ ಮುಗಿದಿದ್ದರೂ ಅದನ್ನು ನವಿಕರಿಸದೆ ಟಿಪ್ಪರ್ ಲಾರಿಯನ್ನು ಚಾಲನೆ ಮಾಡಿ ಅಪಘಾತ ಎಸಗಿದ್ದಾರೆ ಎಂದು ಆಗಿನ ವೃತ್ತ ನಿರೀಕ್ಷಕರಾದ ಸತೀಶ್ ಕುಮಾರ್ ಆರ್. ಅವರು ಆರೋಪಿಯ ವಿರುದ್ಧ ಚಾರ್ಜ್ ಶೀಟ್ ಹಾಕಿದ್ದರು. ವಿಚಾರಣೆ ನಡೆಸಿದ ಸುಳ್ಯದ ಹಿರಿಯ ನ್ಯಾಯಾಧೀಶರಾದ ಸೋಮಶೇಖರ್ ಅವರು ಆರೋಪಿಯ ವಿರುದ್ಧ ಅಪಘಾತದ ಆರೋಪ ಸಾಬೀತಾಗಿಲ್ಲವೆಂದೂ, ಆದರೆ ಟಿಪ್ಪರ್ ಗೆ ವಿಮೆ ನವೀಕರಿಸದಿರುವ ಆರೋಪ ಸಾಬೀತಾಗಿದೆ ಎಂದೂ ತೀರ್ಪು ನೀಡಿ ಅದಕ್ಕಾಗಿ ಆರೋಪಿಗೆ ರೂಪಾಯಿ 2000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ತೆರಲು ತಪ್ಪಿದಲ್ಲಿ , 7 ದಿನಗಳ ಸಾದಾ ಜೈಲು ವಾಸ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ.
ಈ ಎಲ್ಲಾ ಪ್ರಕರಣಗಳಲ್ಲಿ ಅಭಿಯೋಜನದ ಪರವಾಗಿ ಸುಳ್ಯ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ ಅವರು ಸಾಕ್ಷಿ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು. ಅಪಘಾತದ ಆರೋಪ ಮುಕ್ತಗೊಂಡ ಆಶಿಸ್ ಕುಮಾರ್ ಪರವಾಗಿ ನ್ಯಾಯವಾದಿ ಎಂ.ವೆಂಕಪ್ಪ ಗೌಡರು ವಾದಿಸಿದ್ದರು.