ಪಿವಿ ವಿಶೇಷ

ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ನಿಧನ

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿ, ‘ಪೇ ಸಿಎಂ’ ಅಭಿಯಾನ ನಡೆಸಲು ಪೂರಕವಾದ ಆರೋಪ ಮಾಡಿ ರಾಜ್ಯದಾದ್ಯಂತ ಸುದ್ದಿಯಾಗಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (84) ಇಂದು ನಿಧನರಾದರು. ಬೆಂಗಳೂರಿನ ಜ್ಯೋತಿಪುರದ ನಿವಾಸದಲ್ಲಿ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದರು.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೆಂಪಣ್ಣ ಮೊನ್ನೆಯಷ್ಟೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಮನೆಗೆ ವಾಪಾಸಾಗಿದ್ದರು. ಇಂದು ಬೆಳಗ್ಗೆ 10 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ ಎಂದು ಕೆಂಪಣ್ಣ ಆಪ್ತರು, ಕುಟುಂಬದ ಮೂಲಗಳು ತಿಳಿಸಿವೆ.

ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದರು. ಆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಗೂ ಪತ್ರ ಬರೆದು ಸಂಚಲನ ಸೃಷ್ಟಿಸಿದ್ದರು.

ಕಾಂಗ್ರೆಸ್ ಸರ್ಕಾರವನ್ನೂ ಬಿಟ್ಟಿರಲಿಲ್ಲ ಕೆಂಪಣ್ಣ

ಕಾಂಗ್ರೆಸ್ ಆಡಳಿತದಲ್ಲೂ ಶೇ 40ರ ಕಮಿಷನ್ ಮುಂದುವರಿದಿದೆ ಎಂದು ಕೆಂಪಣ್ಣ ಇದೇ ವರ್ಷ ಫೆಬ್ರವರಿಯಲ್ಲಿ ಆರೋಪಿಸಿದ್ದರು. ಕೆಂಪಣ್ಣ ಆರೋಪ ಪ್ರತಿಪಕ್ಷ ಬಿಜೆಪಿಗೆ ಅಸ್ತ್ರವಾಗಿದ್ದರೆ ಆಡಳಿತಾರೂಢ ಕಾಂಗ್ರೆಸ್​ಗೆ ಇರಿಸುಮುರಿಸು ತಂದಿತ್ತು. ಗುತ್ತಿಗೆದಾರರ ಬಿಲ್​ಗಳನ್ನು ಕ್ಲಿಯರ್ ಮಾಡಲು ಕಮಿಷನ್ ಕೇಳಲಾಗುತ್ತಿದೆ ಎಂದು ಕೆಂಪಣ್ಣ ಆರೋಪಿಸಿದ್ದರು. ಇದಕ್ಕೆ ಸ್ಪಷ್ಟನೆ ನೀಡಿದ್ದ ಕಾಂಗ್ರೆಸ್ ನಾಯಕರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಬಿಲ್​ಗಳು ಮಾತ್ರ ಕ್ಲಿಯರ್ ಆಗಿಲ್ಲ ಎಂದು ತೇಪೆಹಚ್ಚಿದ್ದರು.

Related Articles

Leave a Reply

Your email address will not be published. Required fields are marked *

Back to top button