ಬಳ್ಳಾರಿ ಜೈಲಿನಲ್ಲಿ ಸಿನಿಮಾ ನಟರು, ರಾಜಕೀಯ ನಾಯಕರು ನಟ ದರ್ಶನ್ ಭೇಟಿಗೆ ಅವಕಾಶ ಇಲ್ಲ : `DIG’ ಖಡಕ್ ಆದೇಶ
ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರನ್ನು ಇಂದು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದ್ದು, ಜೈಲಿನಲ್ಲಿ ಸಿನಿಮಾ ನಟರು, ರಾಜಕೀಯ ನಾಯಕರು ಯಾರೂ ನಟ ದರ್ಶನ್ ಅವರನ್ನು ಭೇಟಿಯಾಗುವಂತಿಲ್ಲ ಎಂದು ಬೆಂಗಳೂರು ಉತ್ತರ ವಲಯ ಡಿಐಜಿ ಖಡಕ್ ಆದೇಶ ಹೊರಡಿಸಿದ್ದಾರೆ.
ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ನಟ ದರ್ಶನ್ ಅವರನ್ನು ಕರೆತರಲಾಗಿದ್ದು, ನಟ ದರ್ಶನ್ ರನ್ನು ಸಿನಿಮಾ ನಟರು, ರಾಜಕೀಯ ನಾಯಕರು ಯಾರೂ ಭೇಟಿಯಾಗುವಂತಿಲ್ಲ. ಕುಟುಂಬಸ್ಥರು ಹಾಗೂ ನಟ ದರ್ಶನ್ ಪರ ವಕೀಲರ ಭೇಟಿಗೆ ಮಾತ್ರ ಅವಕಾಶ ನೀಡಲಾಗಿದೆ.
ಇನ್ನು ನಟ ದರ್ಶನ್ ಕೈಗೆ ಕಡಗ, ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸ್ಟೈಲಾಗಿ ಎಂಟ್ರಿ ಕೊಟ್ಟಿದ್ದರು. ಹೀಗಾಗಿ ಬೆಂಗಾವಲು ವಾಹನ ಸಿಬ್ಬಂದಿಗೆ ಬೆಂಗಳೂರು ಉತ್ತರ ವಲಯ ಡಿಜಿಪಿ ನೋಟಿಸ್ ನೀಡಲು ಮುಂದಾಗಿದ್ದಾರೆ. ಇಂದು ಬಳ್ಳಾರಿ ಜೈಲಿಗೆ ಪ್ರವೇಶಿಸುತ್ತಿದ್ದಂತೆ ಪೊಲೀಸರು ದರ್ಶನ್ ಹೆಸರು, ತಂದೆಯ ಹೆಸರು ಹಾಗೂ ವಿಳಾಸವನ್ನು ಜೈಲಿನ ಡೈರಿಯೊಳಗೆ ಬರೆದುಕೊಂಡಿದ್ದು, ಬಳಿಕ ಕೊರಳಿನಲ್ಲಿದ್ದ ಸರ ಹಾಗೂ ಕೈಯಲ್ಲಿದ್ದ ಬೆಳ್ಳಿ ಕಡಗವನ್ನು ತೆಗೆಸಿದ್ದಾರೆ. ಬಳಿಕ ವಿಚಾರಣಾಧೀನ ಕೈದಿ ಸಂಖ್ಯೆ 511 ನೀಡಿದ್ದಾರೆ.
ನಟ ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಯ ಕೇಂದ್ರೀಯ ಕಾರಾಗೃಹಕ್ಕೆ ಶಿಫ್ಟ್ ಮಾಡುವ ಕೆಲಸಕ್ಕೆ ಇಂದು ಬೆಳಗ್ಗೆ ಚಾಲನೆ ನೀಡಲಾಗಿತ್ತು. ಪೊಲೀಸರು ಬೆಂಗಳೂರು – ತುಮಕೂರು – ಚಳ್ಳಕೆರೆ – ಮೊಳಕಾಲ್ಮುರು – ರಾಂಪುರ ಮಾರ್ಗವಾಗಿಯೇ ಬಳ್ಳಾರಿಗೆ ಪ್ರಯಾಣಿಸಿದ್ದರು.