ಬಡತನ ರೇಖೆಗಿಂತ ಕೆಳಗಿರುವವರು ‘RTI ಅರ್ಜಿ’ ಸಲ್ಲಿಸಿದ್ರೇ ಶುಲ್ಕವಿಲ್ಲ, ಫ್ರೀ
ಬೆಂಗಳೂರು: ಬಡತನ ರೇಖೆಗಿಂತ ಕೆಳ ಪ್ರವರ್ಗದ ಅರ್ಜಿದಾರರಿಗೆ ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 7(5)ರಡಿಯಲ್ಲಿ ಮಾಹಿತಿ ಪಡೆಯಲು ಶುಲ್ಕ ವಿನಾಯಿತಿ ನೀಡಲಾಗಿದೆ. ಅಂದರೇ ಮಾಹಿತಿ ಹಕ್ಕಿನಡಿ ಅರ್ಜಿಯನ್ನು ಸಲ್ಲಿಸಿದ್ರೇ, ಶುಲ್ಕವಿಲ್ಲದೇ ಉಚಿತವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆ ಬಗ್ಗೆ ಮತ್ತಷ್ಟು ಮಾಹಿತಿ ಮುಂದೆ ಓದಿ.
ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ. ಅದರಲ್ಲಿ ಮಾಹಿತಿ ಹಕ್ಕು ಅಧಿನಿಯಮದಡಿ ಬಡತನದ ರೇಖೆಗಿಂತ ಕೆಳ ಪವರ್ಗಕ್ಕೆ ಸೇರಿರುವ ಅರ್ಜಿದಾರರಾದಲ್ಲಿ, ಅವರುಗಳು ಮಾಹಿತಿ ಪಡೆಯಲು ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ7(5) ರಡಿಯಲ್ಲಿ ಶುಲ್ಕ ವಿನಾಯಿತಿಗೆ ಅವಕಾಶವಿದೆ.
ಆದರೆ, ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 7(5)ರಲ್ಲಿನ ಶುಲ್ಕ ವಿನಾಯಿತಿಗೆ ಅರ್ಜಿದಾರರು ಸಲ್ಲಿಸುವ ವಾರ್ಷಿಕ ಆದಾಯ ಪುಮಾಣ ಪತ್ರಗಳನ್ನು ಹಲವಾರು ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಪರಿಗಣಿಸುತ್ತಿಲ್ಲವೆಂದು ಸರ್ಕಾರಕ್ಕೆ ಮನವಿಗಳು ಸ್ವೀಕೃತಗೊಳ್ಳುತ್ತಿವೆ ಎಂದಿದ್ದಾರೆ.
ಕರ್ನಾಟಕ ಮಾಹಿತಿ ಹಕ್ಕು ನಿಯಮಗಳು, 2005ರ 4ನೇ ಪ್ರಕರಣದ (5) ಮತ್ತು (6)ನೇ ಉಪ ಪುಕರಣದಲ್ಲಿ, ವಿನಾಯಿತಿಯನ್ನು ಕೋರುವ ವ್ಯಕ್ತಿಯು ಬಡತನ ರೇಖೆಗಿಂತ ಕೆಳ ಪ್ರವರ್ಗಕ್ಕೆ ಸೇರಿದವರೆಂದು ಸಂಬಂಧಪಟ್ಟ ಪ್ರಾಧಿಕಾರವು ನೀಡಿದ ಮಾನ್ಯತೆ ಪಡೆದ ಪ್ರಮಾಣ ಪತ್ರವನ್ನು ಹಾಜರುಪಡಿಸತಕ್ಕದ್ದು ಹಾಗೂ ಒಂದು ನೂರು ಪುಟಗಳೊಳಗೆ ಮಾಹಿತಿಯನ್ನು ಕೋರಿದರೆ ಯಾವುದೇ ಶುಲ್ಕವನ್ನು ವಿಧಿಸತಕ್ಕದ್ದಲ್ಲ.
ಆದರೆ ಒಂದು ನೂರು ಪುಟಗಳಿಗಿಂತ ಹೆಚ್ಚಿನ ಮಾಹಿತಿಯನ್ನು ಕೋರಿದ ಸಂದರ್ಭದಲ್ಲಿ, ಸಾರ್ವಜನಿಕ ಮಾಹಿತಿ ಅಧಿಕಾರಿಗಳು (2)ನೇ ಉಪನಿಯಮದ (ಸಿ) ಖಂಡದ ಮೇರೆಗೆ ಶುಲ್ಕವನ್ನು ವಿಧಿಸಿ ಅಗತ್ಯವಾದ ದಸ್ತಾವೇಜುಗಳ ಪರಿಶೀಲಿಸಲು ಅನುಮತಿಸತಕ್ಕದ್ದು.” ಎಂದು ಹೇಳಲಾಗಿದೆ.
ನಿಯಮಗಳ ಆಧಾರದಲ್ಲಿ ಉಲ್ಲೇಖಿತ (2)ರ ಆದೇಶದಂತೆ ನಿಗದಿಪಡಿಸಿರುವ ಕುಟುಂಬ ವಾರ್ಷಿಕ ಆದಾಯ ಮಿತಿ ಆಧಾರದಲ್ಲಿ, ಕಂದಾಯ ಇಲಾಖೆಯಿಂದ ರೂ.1,20,000/ಗಳ ಮಿತಿಯೊಳಗೆ ಪಡೆದ ವಾರ್ಷಿಕ ಆದಾಯ ಪ್ರಮಾಣಪತ್ರವನ್ನು ಒದಗಿಸಿ ಮಾಹಿತಿ ಕೋರುವ ಅರ್ಜಿದಾರರಿಗೆ ಪ್ರಾರಂಭಿಕ ಅರ್ಜಿ ಶುಲ್ಕ ಹಾಗೂ 100 ಪುಟಗಳ ದಾಖಲಾತಿಗಳನ್ನು ಒದಗಿಸಲು ಶುಲ್ಕ ವಿನಾಯಿತಿ ನೀಡಬೇಕಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.