ಪಿವಿ ವಿಶೇಷ

ತುಂಗಭದ್ರಾ ಡ್ಯಾಂನ ಗೇಟ್ ಮುರಿದ ವಿಚಾರದಲ್ಲಿ ನಾವು ರಾಜಕೀಯ ಮಾಡಲ್ಲ : ಸಿ ಎಂ ಸಿದ್ದರಾಮಯ್ಯ

ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ 19ನೇ ಟ್ರಸ್ಟ್ ಗೇಟ್ ಕಳಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ರಾಜಕೀಯ ಮಾಡುವುದಿಲ್ಲ. ಅಲ್ಲದೆ, ಸದ್ಯಕ್ಕೆ ಯಾರ ಮೇಲೆ ಗೂಬೆ ಕೂರಿಸಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ಬಸಾಪೂರ ಗ್ರಾಮದ ಲಘು ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಬೋರ್ಡ್ ಇರುವುದು ಕೇಂದ್ರ ಸರಕಾರದ ಅಧೀನದಲ್ಲಿ. ಬೋರ್ಡ್ ಗೆ ಐಎಎಸ್ ಅಧಿಕಾರಿಗಳನ್ನು ಭಾರತ ಸರಕಾರ ನೇಮಕ ಮಾಡುತ್ತದೆ‌. ಬೋರ್ಡ್ ನಲ್ಲಿ ರಾಜ್ಯ, ಆಂಧ್ರ, ತೆಲಂಗಾಣದ ಅಧಿಕಾರಿಗಳು ಇರುತ್ತಾರೆ ಎಂದರು.

ವಾಸ್ತವವಾಗಿ ನಿರ್ವಹಣೆ ವೈಫಲ್ಯ ಇರುವುದು ಕೇಂದ್ರ ಸರಕಾರದಿಂದ. ಇದೆಲ್ಲವನ್ನು ಆರೋಪ ಮಾಡಬೇಕಿದ್ದು ಕೇಂದ್ರದ ಮೇಲೆ. ಆದರೆ, ನಾನು ಡ್ಯಾಂ ವಿಚಾರದಲ್ಲಿ ರಾಜಕೀಯ ಮಾಡಲು ಹೋಗುವುದಿಲ್ಲ. ಬಿಜೆಪಿಯವರು ರಾಜಕೀಯವಾಗಿ ಟೀಕೆ ಮಾಡುತ್ತಾರೆ. ಅದಕ್ಕೆಲ್ಲ ನಾನು ಉತ್ತರ ಕೊಡಲ್ಲ ಎಂದರು.

ಈಗ ತುಂಗಭದ್ರಾ 19 ನೇ ಗೇಟ್ ಕಟ್ಟಾಗಿದೆ. ಇದರಲ್ಲಿ ರಾಜ್ಯ ಸರಕಾರದ ಹೊಣೆಗೇಡಿತನ ಅಂದ್ರೆ ಏನರ್ಥ…? ಇದರ ನೇರ ಹೊಣೆ ಬೋರ್ಡ್ ನದ್ದು.ಆದರೂ ಇದರಲ್ಲಿ ನಾನು ಯಾರು ತಪ್ಪು ಮಾಡಿದ್ದಾರೆ ಎಂಬುದನ್ನು ಹೇಳಲು ಹೋಗಲ್ಲ. ಸದ್ಯ ರೈತರ ಹಿತ ಕಾಯುವುದು ಮೊದಲ ಆದ್ಯತೆ. ತುಂಗಭದ್ರಾ ಜಲಾಶಯ 105 ಟಿಎಂಸಿ ತುಂಬಿತ್ತು. ಇದರಲ್ಲಿ 50 ಟಿಎಂಸಿ ನೀರು ಹೊರ ಬಿಡಬೇಕಿದೆ. ಉಳಿಯುವ ನೀರನ್ನು ರೈತರ ಅನುಕೂಲಕ್ಕೆ ಬಳಸಲಾಗುವುದು ಎಂದರು.

ರೈತರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಲು  ಬಿಡುವುದಿಲ್ಲ. ಮೊದಲನೇ ಬೆಳಗೆ ನೀರು ಕೊಟ್ಟೆ ಕೊಡುತ್ತೇವೆ. ಹವಾಮಾನ ಮೂನ್ಸೂಚನೆ ಪ್ರಕಾರ ಡ್ಯಾಂಗೆ ಆಗಷ್ಟ್, ಸೆಪ್ಟೆಂಬರ್, ಅಕ್ಟೊಬರ್ ತಿಂಗಳಲ್ಲಿ ಮತ್ತಷ್ಟು ನೀರು ಬರುವ ಸಾಧ್ಯತೆಯಿದೆ. ಎಷ್ಟು ನೀರು ಹೊರ ಹೋಗುತ್ತದೆ. ಅಷ್ಟು ನೀರು ಮಳೆಯಿಂದ ಮತ್ತೆ ಬರಲಿದೆ. ರೈತರು ಎದೆಗುಂದಬೇಕಿಲ್ಲ. ತುಂಗಭದ್ರಾ ಡ್ಯಾಂ ಹಳೇ ಡ್ಯಾಂ ಆಗಿದೆ. ಆವತ್ತಿನಿಂದ ಏನು ತೊಂದರೆಯಾಗಿರಲಿಲ್ಲ.‌ ಮೊದಲ ಬಾರಿಗೆ ಗೇಟ್ ನ ಚೈನ್ ಲಿಂಕ್ ಕಟ್ ಆಗಿದೆ ಎಂದರು.

Related Articles

Leave a Reply

Your email address will not be published. Required fields are marked *

Back to top button