ಈ ಬಾರಿ ಶಿವಮೊಗ್ಗದಲ್ಲೂ “ಕಂಬಳ’!
ಮಂಗಳೂರು: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲೂ ಕರಾವಳಿಯ “ಅಲೇ… ಬುಡಿಯೆರ್ಗೆ..’ ಕೇಳಿ ಬರುವ ಸಾಧ್ಯತೆಯಿದ್ದು, ಕಂಬಳಕ್ಕೆ ತೆರೆಮರೆಯ ಸಿದ್ಧತೆ ನಡೆಯುತ್ತಿದೆ.
ಕರಾವಳಿಯ ಪ್ರಮುಖ ಜಾನಪದ ಕ್ರೀಡೆಯಾಗಿರುವ ಕಂಬಳವನ್ನು ಕಳೆದ ವರ್ಷ ಬೆಂಗಳೂರಿನಲ್ಲಿ ನಡೆಸಲಾಗಿತ್ತು. ಜತೆಗೆ ಇತರ ಕಡೆಗಳಲ್ಲೂ ಕಂಬಳ ಆಯೋಜನೆಗೆ ಒಲವು ವ್ಯಕ್ತವಾಗಿದೆ. ಅದರಂತೆ ಶಿವಮೊಗ್ಗದಲ್ಲಿ ಈ ಬಾರಿ ಕಂಬಳ ನಡೆಸಲು ಅಲ್ಲಿನ ಉದ್ಯಮಿಗಳು, ಕರಾವಳಿ ಭಾಗದ ಪ್ರಮುಖರು ಹಾಗೂ ಇತರರು ಆಸಕ್ತಿ ತೋರಿದ್ದಾರೆ.
ನವೆಂಬರ್ ಆರಂಭದಲ್ಲಿ ಬೆಂಗ ಳೂರಿನಲ್ಲಿ ಕಂಬಳ ಹಾಗೂ ಕಂಬಳ ಋತುವಿನ ಕೊನೆಗೆ ಶಿವಮೊಗ್ಗದಲ್ಲಿ ಕಂಬಳ ಆಯೋಜಿಸಲು ಕಂಬಳ ಸಮಿತಿ ನಿರ್ಧರಿಸಿದೆ. ಈ ಕುರಿತಂತೆ ಅಂತಿಮ ತೀರ್ಮಾನವನ್ನು ಕೆಲವೇ ದಿನಗಳಲ್ಲಿ ನಡೆಯಲಿರುವ ಜಿಲ್ಲಾ ಕಂಬಳ ಸಮಿತಿ ಮಹಾಸಭೆಯಲ್ಲಿ ಕೈಗೊಳ್ಳಲಾಗುತ್ತದೆ.
ಮುಂಬಯಿ, ಹಾಸನದಲ್ಲೂ ಸಾಧ್ಯತೆ
ಬೆಂಗಳೂರಿನಲ್ಲಿ ಯಶಸ್ವಿಯಾದ ಕಾರಣದಿಂದ ನಾಡಿನ ಬೇರೆ ಬೇರೆ ಕಡೆಗಳಿಂದ ಕಂಬಳ ಆಯೋಜನೆಗೆ ಒಲವು ವ್ಯಕ್ತವಾಗಿದೆ. ಕರಾವಳಿ ಭಾಗದವರು ಹೆಚ್ಚಿರುವ ಮುಂಬಯಿಯಲ್ಲಿ ಕಂಬಳ ಮಾಡುವಂತೆ ಕೆಲವರು ಆಗ್ರಹಿಸಿದ್ದಾರೆ. ಆದರೆ ಅಲ್ಲಿಗೆ ಕೋಣಗಳನ್ನು ಕೊಂಡೊಯ್ಯುವುದು ಕಷ್ಟ ಎಂಬುದು ಕೆಲವರ ಅಭಿಪ್ರಾಯ. ಮತ್ತೂಂದೆಡೆ ಹಾಸನದಲ್ಲಿ ಕಂಬಳ ಮಾಡಲು ಕೆಲವರು ಆಸಕ್ತಿ ತೋರಿಸುತ್ತಿದ್ದಾರೆ.