ನಾಯಿ ಮಾಂಸ ಭೀತಿ: ಮಾಂಸದಂಗಡಿಗಳಿಗೆ ವ್ಯಾಪಾರ ಪರವಾನಗಿ ಕಡ್ಡಾಯಗೊಳಿಸಿದ BBMP
ಬೆಂಗಳೂರು; ನಾಯಿ ಮಾಂಸ ವಿವಾದ ಬೆನ್ನಲ್ಲೇ ಮಾಂಸದಂಗಡಿಗಳಿಗೆ ವ್ಯಾಪಾರ ಪರವಾನಗಿಯನ್ನು ಕಡ್ಡಾಯಗೊಳಿಸಿರುವುದಾಗಿ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೇಳಿದೆ.
ಬಿಬಿಎಂಪಿ ಆರೋಗ್ಯ ವಿಶೇಷ ಆಯುಕ್ತ ಸುರಲ್ಕರ್ ವಿಕಾಸ್ ಕಿಶೋರ್ ಅವರು ಮಾತನಾಡಿ, ಮಾಂಸದ ಅಂಗಡಿಗಳಿಗೆ ವ್ಯಾಪಾರ ಪರವಾನಗಿ ನೀಡಲು ಸಮಿತಿಯನ್ನು ರಚಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಮಾಂಸ ಮಾರಾಟಕ್ಕೆ ವ್ಯಾಪಾರಿಗಳು ಎಫ್ಎಸ್ಎಸ್ಎಐ ಪರವಾನಗಿ ಹೊಂದಿರುತ್ತಾರೆ. ಆದರೆ, ಬಿಬಿಎಂಪಿ ಪರವಾನಗಿ ಪಡೆಯುತ್ತಿಲ್ಲ. ಕೇವಲ ಕುರಿ ಮಾಂಸ ಮಾರಾಟ ಮಾಡುವವರಷ್ಟೇ ಅಲ್ಲದೆ, ಇನ್ನು ಮುಂದೆ ಚಿಕನ್, ಫಿಶ್ ಸೇರಿದಂತೆ ಯಾವುದೇ ಮಾಂಸ ಮಾರಾಟ ಮಾಡುವ ವ್ಯಾಪಾರಿಗಳು ಬಿಬಿಎಂಪಿಯಿಂದ ವ್ಯಾಪಾರ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.
ವ್ಯಾಪಾರ ಪರವಾನಗಿ ಸಂಬಂಧ ಸಮಿತಿಯನ್ನು ರಚಿಸಲಾಗುತ್ತಿದ್ದು, ಈ ಸಮಿತಿಯು ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ ಮತ್ತು ಇತರೆ ನಿಯಮಗಳ ಅಡಿಯಲ್ಲಿನ ನಿಬಂಧನೆಗಳನ್ನು, ವರದಿಯನ್ನು ಮುಖ್ಯ ಆಯುಕ್ತರಿಗೆ ಸಲ್ಲಿಸುತ್ತದೆ.
ಇದಲ್ಲದೆ, ಬಿಬಿಎಂಪಿ ಪಶುಸಂಗೋಪನಾ ಇಲಾಖೆ ಮತ್ತು ಆರೋಗ್ಯ ಅಧಿಕಾರಿಗಳು ಮಾಂಸದ ಅಂಗಡಿಗಳಿಗೆ ಭೇಟಿ ನೀಡಿ ಅವುಗಳ ಸುರಕ್ಷತೆ ಮತ್ತು ನೈರ್ಮಲ್ಯವನ್ನು ಪರಿಶೀಲನೆ ನಡೆಸುತ್ತಾರೆ. ಇತರೆ ರಾಜ್ಯಗಳಿಂದ ಮಾಂಸ ತಂದು ಮಾರಾಟ ಮಾಡುವ ಸಣ್ಣ ಅಂಗಡಿ ಮಾಲೀಕರು, ವ್ಯಾಪಾರಿಗಳು ಮತ್ತು ಪೂರೈಕೆದಾರರಿಗೆ ನಿಗದಿತ ಕ್ರಮದ ನಂತರ ಬಿಬಿಎಂಪಿ ಟ್ರೇಡ್ ಲೈಸೆನ್ಸ್ ಪಡೆಯಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.