ಪಿವಿ ವಿಶೇಷ

ಬಲಿಗಾಗಿ ಬಾಯ್ತೆರೆದು ನಿಂತಿರುವ ಪಾಳು ಬಾವಿ..!ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ…!

ಹನೂರು :- ಪಟ್ಟಣದ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯ ಕೆ-ಶಿಪ್ ಹೆದ್ದಾರಿಗೆ ಹೊಂದಿಕೊಂಡಂತಿದ್ದು ಬಲಿಗಾಗಿ ಕಾದು ಕುಳಿತಿರುವ ಕೊಳಕು ಪಾಳು ಬಾವಿಯನ್ನು ಮುಚ್ಚಲು ಕೊಳಚೆ ನಿವಾರಣೆ ಮಾಡಲು ಜಿಲ್ಲಾಡಳಿತ ಮೀನ-ಮೇಷ ಎಣಿಸುವ ಮೂಲಕ ಸಾರ್ವಜನಿಕರ ಜೀವದ ಜತೆ ಚೆಲ್ಲಾಟವಾಡುತ್ತಿದೆ. ಕೆ-ಶಿಪ್ ನವರು ಉದ್ದಕ್ಕೂ ನಿರ್ಮಿಸಿರುವ ಒಳಚರಂಡಿಯನ್ನು ಕ್ಷುಲ್ಲಕ ಕಾರಣದ ನೆಪವೊಡ್ಡಿ ಈ ಬಾವಿಯ ಅಳತೆಗೆ ಸರಿಯಾಗಿ ನಿರ್ಮಿಸದೆ ಅವೈಜ್ಞಾನಿಕವಾಗಿ ಅಪೂರ್ಣಗೊಳಿಸಿರುವುದರಿಂದ ಅಪಾಯವಾಗುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಭಿತ್ತರಗೊಂಡ ಹಿನ್ನೆಲೆಯಲ್ಲಿ ಕಾಟಾಚಾರಕ್ಕೆ ಹಾರಿಗೊಂದು ಹೈನಿಗೊಂದು ಎಂಬಂತೆ ಕೆಲ ಕಾಂಕ್ರೀಟ್ ಡಿವೈಡರ್ ಗಳ ತುಂಡುಗಳನ್ನು ಹಾಕಿ ಕೈ ತೊಳೆದುಕೊಂಡಿರುವುದು ನಾಗರೀಕರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ಹತ್ತಾರು ವರ್ಷಗಳಿಂದ ಅಕ್ಕ ಪಕ್ಕದ ಹತ್ತಾರು ಹೋಟೆಲ್ ಗಳ ಕೊಳಕಲ್ಲದೆ ಇಡೀ ಏರಿಯಾದ ಅಂಗಡಿ ಮುಂಗಟ್ಟುಗಳ, ಕಾರು ಬೈಕ್ ಗ್ಯಾರೇಜುಗಳ ತ್ಯಾಜ್ಯವನ್ನು ತನ್ನ ಒಡಲಲ್ಲಿಟ್ಟುಕೊಂಡು ತುಂಬಿ ತುಳುಕುತ್ತಾ ಕೊಳೆತು ಗಬ್ಬೆದ್ದು ನಾರುತ್ತಾ ಸಾಂಕ್ರಾಮಿಕ ರೋಗವನ್ನು ಹರಡಲು ಸನ್ನದ್ದವಾಗಿರುವುದರ ಜತೆಗೆ ನಿಯಂತ್ರಣ ತಪ್ಪಿಯೋ ಅಚಾನಕ್ಕಾಗೋ ನುಗ್ಗುವ ವಾಹನಗಳವರನ್ನು ಬಲಿ ತೆಗೆದುಕೊಳ್ಳಲು ಈ ಪಾಳು ಬಾವಿ ತುದಿಗಾಲಲ್ಲಿ ನಿಂತಂತಿದೆ.ಇಂತಹ ವಿಷಮ ಪರಿಸ್ಥಿತಿಯಲ್ಲಿರುವ ಅಪಾಯಕಾರೀ, ಕೊಳಚೆ ಬಾವಿಯ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ‌ ತರಾತುರಿಯಲ್ಲಿ ತಾತ್ಕಾಲಿಕವಾಗಿ ಕಾಟಾಚಾರದ ಕಾಂಕ್ರೀಟ್ ಡಿವೈಡರ್ ತುಂಡುಗಳನ್ನು ಹಾಕಿರುವುದನ್ನು ಬಿಟ್ಟರೆ ಶಾಶ್ವತ ಪರಿಹಾರಕ್ಕೆ ಮುಂದಾಗಿಲ್ಲ. ನಾಗರೀಕರ ಸುರಕ್ಷತೆಯ ಬಗ್ಗೆಯಾಗಲಿ ಆರೋಗ್ಯದ ಬಗ್ಗೆಯಾಗಲಿ ಜಿಲ್ಲಾಡಳಿತಕ್ಕೆ ಕಿಂಚಿತ್ತೂ ಕಾಳಜಿ ಇಲ್ಲದಿರುವುದು ಅವರ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದರೂ ತಪ್ಪಾಗಲಾರದು.ಈ ಡಿವೈಡರ್ ಗಳಿಂದ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಕಾರುಗಳಂತಹ ಲಘು ವಾಹನಗಳು ಅಪಘಾತದಿಂದ ಪಾರಾಗಬಹುದೆ ವಿನಹ ದ್ವಿಚಕ್ರ ವಾಹನಗಳಿಗೆ ಯಾವುದೇ ಭದ್ರತೆಯಿಲ್ಲದಾಗಿದೆ. ಅಚಾನಕ್ಕಾಗಿ ನುಗ್ಗಿದರಂತು ಅಪಾಯ ಕಟ್ಟಿಟ್ಟ ಬುತ್ತಿಯೇ ಸರಿ ಎಂಬಂತಾಗಿದೆ ಪರಿಸ್ಥಿತಿ. ಸುರಕ್ಷತೆಯ ಕತೆ ಇಂಗಾದರೆ ಇನ್ನು ಹೋಟೆಲ್ ಗಳಿಂದ ನಿರಂತರವಾಗಿ ಯಾವುದೇ ಅಡ್ಡಿ ಆತಂಕವಿಲ್ಲದೆ ಕೊಳಕು ನೀರನ್ನು ಬಿಡಲಾಗುತ್ತಿದ್ದು ಅಂಗಡಿಗಳವರು ಕೊಳಚೆ ತ್ಯಾಜ್ಯವನ್ನು ಸುರಿಯುವುದಕ್ಕೆ ಜವಾಬ್ದಾರಿಯುತ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಯಾವುದೇ ಬ್ರೇಕ್ ಹಾಕಿಲ್ಲ. ಒಟ್ಟಾರೆ ಜನರ ಆರೋಗ್ಯದ ಬಗ್ಗೆ ಕಾಳಜಿಯಾಗಲಿ ಪ್ರಾಣಕ್ಕೆ ಬೆಲೆಯಾಗಲಿ ಅಧಿಕಾರಿ ವರ್ಗದಿಂದ ನಿರೀಕ್ಷಿಸುವಂತಿಲ್ಲ ಎಂಬಂತಾಗಿದೆ ಸಧ್ಯದ ಪರಿಸ್ಥಿತಿ.ಹೆಚ್ಚಿನ‌ ಅವಘಡ ಸಂಭವಿಸುವ ಮುನ್ನ ಕೊಳಕು ತ್ಯಾಜ್ಯವನ್ನು ತೆರವುಗೊಳಿಸಿ ಪಾಳು ಬಾವಿಯನ್ನು‌ ಮುಚ್ಚಿ ಅಪೂರ್ಣ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಿ ಪ್ರಯಾಣಿಕರನ್ನು ಪ್ರಾಣಾಪಾಯದಿಂದ ಪಾರು ಮಾಡುವರೆ..? ಮ. ಬೆಟ್ಟಕ್ಕೆ ಬಂದು ಇಲ್ಲಿ ಆಹಾರ ಸೇವಿಸಿ ಅನಾರೋಗ್ಯದ ಬೀತಿಯಿಂದಲೇ ತೆರಳುವ ಭಕ್ತರನ್ನು ರಕ್ಷಿಸುವರೆ..? ಅಥವಾ ಅವಘಡಗಳು ಸಂಭವಿಸಿದರೆ ಅದರ ಹೊಣೆ ಹೊರುವರೆ..? ನಿರ್ಧಾರ ಜಿಲ್ಲಾಡಳಿತದ ಮುಂದಿದೆ.

Related Articles

Leave a Reply

Your email address will not be published. Required fields are marked *

Back to top button