‘ಗಂಡ ನನ್ನನ್ನು ಉಪಯೋಗಿಸಿಕೊಂಡ’; ಕಣ್ಣೀರು ಹಾಕಿ ಎಲ್ಲರ ಎದುರು ದುಃಖ ತೋಡಿಕೊಂಡ ರಾಖಿ ಸಾವಂತ್
ಬಿಗ್ ಬಾಸ್ ಶೋ ಮುಗಿದ ಬಳಿಕವೂ ರಿತೇಶ್ ಮತ್ತು ರಾಖಿ ಸಾವಂತ್ ಒಂದೇ ಮನೆಯಲ್ಲಿ ವಾಸವಾಗಿದ್ದರು. ಈಗ ಏಕಾಏಕಿ ಗಂಟುಮೂಟೆ ಕಟ್ಟಿಕೊಂಡು ರಿತೇಶ್ ಮನೆ ಬಿಟ್ಟು ಪರಾರಿ ಆಗಿದ್ದಾರೆ.
ನಟಿ ರಾಖಿ ಸಾವಂತ್ (Rakhi Sawant) ಅವರ ವೈಯಕ್ತಿಕ ಜೀವನ ಕಷ್ಟಕ್ಕೆ ಸಿಲುಕಿದೆ. ಉದ್ಯಮಿ ಎಂದು ಹೇಳಿಕೊಂಡಿರುವ ರಿತೇಶ್ ಜೊತೆ ತಾವು ಮದುವೆ (Rakhi Sawant Marriage) ಆಗಿರುವುದಾಗಿ ತಿಳಿಸಿದ್ದ ರಾಖಿ ಸಾವಂತ್ ಈಗ ಮತ್ತೆ ಒಂಟಿ ಜೀವನ ನಡೆಸುವಂತಾಗಿದ್ದಾರೆ. ಇವರ ಮದುವೆ ವಿಚಾರ ಮೊದಲಿನಿಂದಲೂ ನಿಗೂಢವಾಗಿಯೇ ಉಳಿದಿತ್ತು. ಮೊದಲ ಹೆಂಡತಿಗೆ ವಿಚ್ಛೇದನ ನೀಡದೆಯೇ ರಿತೇಶ್ ಅವರು ರಾಖಿ ಸಾವಂತ್ ಜೊತೆ ಸಂಸಾರ ಶುರು ಮಾಡಿದ್ದರು. ಈಗ ಈ ಸತ್ಯ ಬಯಲಾಗಿದೆ. ರಿತೇಶ್ಗೆ ಕಾನೂನಿನ ಭಯ ಉಂಟಾಗಿದೆ. ಮೊದಲ ಪತ್ನಿ ಕಡೆಯಿಂದ ಸಂಕಷ್ಟ ಹೆಚ್ಚುವುದಕ್ಕೂ ಮುನ್ನವೇ ಅವರು ರಾಖಿ ಸಾವಂತ್ಗೆ ಕೈ ಕೊಟ್ಟು ಪರಾರಿ ಆಗಿದ್ದಾರೆ. ಅವರನ್ನು ನಂಬಿ ಮೋಸ ಹೋಗಿರುವ ರಾಖಿ ಸಾವಂತ್ ಅವರು ಈಗ ಮಾಧ್ಯಮಗಳ ಎದುರಿನಲ್ಲಿ ಕಣ್ಣೀರು ಹಾಕುವಂತಾಗಿದೆ. ಹಿಂದಿ ಬಿಗ್ ಬಾಸ್ 15ನೇ (Bigg Boss 15) ಸೀಸನ್ನಲ್ಲಿ ಇವರಿಬ್ಬರ ಮದುವೆ ವಿಚಾರ ಬಯಲಾಗಿತ್ತು. ಆದರೆ ಈಗ ರಾಖಿ ಸಾವಂತ್ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಅವರ ಸ್ಥಿತಿ ಕಂಡು ಅಭಿಮಾನಿಗಳು ಅಯ್ಯೋ ಪಾಪ ಎನ್ನುತ್ತಿದ್ದಾರೆ. ಇದಕ್ಕೆ ರಿತೇಶ್ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಕೌತುಕ ಮೂಡಿದೆ.
‘ರಿತೇಶ್ ನನ್ನನ್ನು ಉಪಯೋಗಿಸಿಕೊಂಡಿದ್ದಾನೆ. ಯಾರು ಯಾರನ್ನು ಉಪಯೋಗಿಸಿಕೊಂಡರು ಎಂಬುದನ್ನು ದೇಶದ ಜನತೆಯೇ ನಿರ್ಧರಿಸಲಿ. ಒಂದು ವೇಳೆ ನಾನು ಅವನನ್ನು ಉಪಯೋಗಿಸಿಕೊಂಡಿದ್ದರೆ ಮುಂಬೈನಲ್ಲಿ ನನ್ನ ಸ್ವಂತ ಫ್ಲಾಟ್ ಇರುತ್ತಿತ್ತು. ಅವನು ನನಗೆ ಏನನ್ನೂ ಕೊಟ್ಟಿಲ್ಲ’ ಎಂದು ರಾಖಿ ಸಾವಂತ್ ಹೇಳಿದ್ದಾರೆ.
ಹಿಂದಿ ಬಿಗ್ ಬಾಸ್ 15ನೇ ಸೀಸನ್ನಲ್ಲಿ ರಿತೇಶ್ ಅವರನ್ನು ರಾಖಿ ಸಾವಂತ್ ಪರಿಚಯ ಮಾಡಿಕೊಟ್ಟಿದ್ದರು. ವೈಲ್ಡ್ ಕಾರ್ಡ್ ಮೂಲಕ ಅವರಿಬ್ಬರೂ ದೊಡ್ಮನೆ ಪ್ರವೇಶಿಸಿದ್ದರು. ಬಿಗ್ ಬಾಸ್ ಶೋ ಮುಗಿದ ಬಳಿಕವೂ ಇಬ್ಬರೂ ಒಂದೇ ಮನೆಯಲ್ಲಿ ವಾಸವಾಗಿದ್ದರು. ಆದರೆ ನಂತರದ ದಿನಗಳಲ್ಲಿ ಇಬ್ಬರ ನಡುವೆ ವೈಮನಸ್ಸು ಮೂಡಿದೆ. ಈಗ ಏಕಾಏಕಿ ಗಂಟುಮೂಟೆ ಕಟ್ಟಿಕೊಂಡು ರಿತೇಶ್ ಮನೆ ಬಿಟ್ಟು ಪರಾರಿ ಆಗಿದ್ದಾರೆ. ಇದು ರಾಖಿ ಸಾವಂತ್ ದುಃಖಕ್ಕೆ ಕಾರಣ ಆಗಿದೆ.