ಪಿವಿ ವಿಶೇಷ

ಮುಂಗಾರು ಬೆಳೆ ತಿನ್ನಲು ನುಗ್ಗುವ ನೂರಾರು ಸಂಖ್ಯೆಯ ಜಿಂಕೆಗಳ‌ ಕಾಟಕ್ಕೆ ಬೀದರ್ ಜಿಲ್ಲೆಯ ರೈತರು ಬೇಸತ್ತಿದ್ದಾರೆ.

ಪೊಲೀಸ್ ವಾರ್ತೆ ಬೀದರ್
“ಬೀದರ್ ಜಿಂಕೆಗಳ ತಾಣವಾಗಿದೆ. ಆದರೆ, ರೈತರು ಬೆಳೆದ ಬೆಳೆಯೇ ಆಹಾರವಾಗಿ ಮಾಡಿಕೊಂಡ ಜಿಂಕೆ ಹಾಗೂ ಕೃಷ್ಣಮೃಗಗಳ ಹಿಂಡು ರೈತರ ಹೊಲಗಳಿಗೆ ನುಗ್ಗಿ ಬೆಳೆಗಳನ್ನು ಸರ್ವನಾಶ ಮಾಡುತ್ತಿವೆ” ಎಂದು ರೈತರು ಆರೋಪಿಸಿದರು.
ಎರಡು ದಿನಗಳ ಹಿಂದೆ ಔರಾದ ತಾಲೂಕಿನ ಚಟ್ನಾಳ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕೃಷ್ಣಮೃಗಗಳು ಓಡಾಡುತ್ತಿರುವ ದೃಶ್ಯಗಳನ್ನು ಅರಣ್ಯಾಧಿಕಾರಿಗಳು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಜಿಂಕೆಗಳಿಗೆ ರೈತರ ಬೆಳೆಯೇ ಆಹಾರ
ಔರಾದ ತಾಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ಅರಣ್ಯ ಪ್ರದೇಶದಲ್ಲಿ ಸಾವಿರಾರು ಕೃಷ್ಣಮೃಗಗಳು ವಾಸಿಸುತ್ತಿವೆ. ತಮ್ಮ ಹಸಿವು ನೀಗಿಸಿಕೊಳ್ಳುವ ತವಕದಲಿದ್ದ ಕಾಡುಪ್ರಾಣಿಗಳು ಕಾಡಿನಲ್ಲಿ ಅಗತ್ಯವಾದ ಆಹಾರ ಸಿಗದ ಕಾರಣ ವಾಸ್ತವ್ಯ ತೊರೆದು ರೈತರ ಹೊಲಗಳಿಗೆ ನುಗ್ಗುತ್ತಿವೆ.
“ಮುಂಗಾರು ಬೆಳೆಗಳಾದ ಸೋಯಾಬೀನ್,‌ ಉದ್ದು, ತೊಗರಿ ಸೇರಿದಂತೆ ಇತರೆ ಬೆಳೆಗಳು ಜಿಂಕೆಗಳಿಗೆ ಪ್ರಿಯವಾದ ಆಹಾರ ಎನ್ನುವಂತಿದೆ.‌ ನೂರಾರು ಸಂಖ್ಯೆಯ ಹಿಂಡು ಒಮ್ಮೆ ಹೊಲಗಳಿಗೆ ನುಗ್ಗಿದ್ದರೆ ಸಾಕು ಇಡೀ ಹೊಲದ ಬೆಳೆಯನ್ನು ಮಣ್ಣುಪಾಲು ಮಾಡುತ್ತಿವೆ. ಬೆಳೆ ರಕ್ಷಿಸಿಕೊಳ್ಳಲು ರೈತರು ರಾತ್ರಿ ವೇಳೆ ಹೊಲದಲ್ಲೇ ವಾಸ್ತವ್ಯ ಹೂಡಿದರೂ ಕದ್ದುಮುಚ್ಚಿ ಬಂದು ನಾಶಪಡಿಸುತ್ತಿವೆ” ಎಂದು ರೈತರು ಅವಲತ್ತುಕೊಂಡಿದ್ದಾರೆ.
ಸೋಲಾರ್ ತಂತಿ ಬೇಲಿ ಮೊರೆ ಹೋದ ರೈತರು
ಒಂದು ಕಡೆ ಮಳೆಯ ಅಭಾವ, ಇನ್ನೊಂದು ಕಡೆ ಜಿಂಕೆಗಳ ಕಾಟದಿಂದ ರೈತರು ಹೈರಾಣಾಗಿದ್ದಾರೆ. ಹಿಂಡು ಹಿಂಡಾಗಿ ಹೊಲಗಳಿಗೆ ನುಗ್ಗುವ ಜಿಂಕೆಗಳು ಎಕರೆಗಟ್ಟಲೆ ಬೆಳೆಯನ್ನು ತಿನ್ನುತ್ತಿವೆ. ಸಾಲ ಸೋಲ ಮಾಡಿ ಬೆಳೆದ ಬೆಳೆಯ ರಕ್ಷಣೆಗೆ ರೈತರೇ ಹಗಲು ರಾತ್ರಿ ಕಾವಲು ಕಾಯುವಂತಾಗಿದೆ.
ಎರಡ್ಮೂರು ವರ್ಷಗಳ ಹಿಂದೆ ಬೆಳೆ ರಕ್ಷಣೆಗೆ ಹೊಲದ ಸುತ್ತಲೂ ಸೀರೆ ಕಟ್ಟುವ ಉಪಾಯ ಮಾಡಿದರು.‌‌ ಆದರೆ ಅದರಿಂದಲೂ ರಕ್ಷಣೆಯಾಗದ ಹಿನ್ನೆಲೆಯಲ್ಲಿ ಇದೀಗ ಸೋಲಾರ್ ಬಳಕೆಗೆ ಮುಂದಾಗಿದ್ದಾರೆ.
ಜಿಂಕೆಗಳ ಕಾಟದ ಕುರಿತು ಅರಣ್ಯಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದ ಕಾರಣ ರೈತರು ಹೊಲದ ಸುತ್ತ ಕಬ್ಬಿಣದ ತಂತಿ ಬೇಲಿ ಹಾಕಿ ಸೋಲಾರ್ ಅಳವಡಿಸುವ ಮೂಲಕ ಬೆಳೆ ರಕ್ಷಿಸಿಕೊಳ್ಳಲು ಹೊಸ ಉಪಾಯ ಕಂಡುಕೊಂಡಿದ್ದಾರೆ.
ಕೃಷ್ಣಮೃಗಗಳ ಸಂರಕ್ಷಣಾ ಮೀಸಲು ಪ್ರದೇಶ ಸಂರಕ್ಷಣೆಗೆ 2 ಕೋಟಿ ರೂ. ಅನುದಾನ
ಜಿಲ್ಲೆಯಲ್ಲಿ ಕೃಷ್ಣಮೃಗಗಳು ಹೆಚ್ಚಾಗಿ ಕಂಡು ಬರುವುದರಿಂದ ಕೃಷ್ಣಮೃಗಗಳ ಸಂರಕ್ಷಣಾ ಮೀಸಲು ಪ್ರದೇಶ ಘೋಷಣೆ ಮಾಡಿದ್ದಾರೆ.
ಈ ಸಂರಕ್ಷಣಾ ಮೀಸಲು ಪ್ರದೇಶ ರಕ್ಷಣೆ ಮತ್ತು ನಿರ್ವಹಣೆಗೆ 2 ಕೋಟಿ ರೂ. ನುದಾನ ಕೂಡ ಘೋಷಿಸಿದ್ದಾರೆ. ಬೀದರ್ ಉಸ್ತುವಾರಿ ಸಚಿವ, ಅರಣ್ಯ ಪರಿಸರ ಹಾಗೂ ಜೈವಿಕ ಖಾತೆ ಸಚಿವ ಈಶ್ವರ ಖಂಡ್ರೆಯವರು ಜಿಲ್ಲೆಯವರೇ ಆಗಿರುವ ಕಾರಣ ಹೆಚ್ಚಿನ ಆದ್ಯತೆ ಕೊಟ್ಟು ಜಿಂಕೆಗಳ ಸಂರಕ್ಷಣೆಗೆ ಮುಂದಾದರೆ ಜಿಲ್ಲೆಯ ರೈತರು ನಿಟ್ಟುಸಿರು ಬಿಡುವಂತಾಗುತ್ತದೆ ಎಂದು ರೈತರು‌‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಕೃಷ್ಣಮೃಗಗಳ ಸಂರಕ್ಷಣಾ ಮೀಸಲು ಪ್ರದೇಶ ಗುರುತಿಸಿ ಜಿಲ್ಲೆಯ ಹಲವೆಡೆ ವಾಸವಾಗಿರುವ ಜಿಂಕೆಗಳನ್ನು ಸಂರಕ್ಷಿಸಲು ‘ಜಿಂಕೆ ವನ’ ನಿರ್ಮಾಣದ ಅಗತ್ಯವಿದೆ” ಎಂದು ವನ್ಯಜೀವಿ ಪ್ರೇಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ವರದಿ ಫೇರೋಜ್ ಅಲಿ ಬೀದರ್

Related Articles

Leave a Reply

Your email address will not be published. Required fields are marked *

Back to top button