ನರ ಬಲಿಗಾಗಿ ಕಾಯುತ್ತಿರುವ ಯಮರೂಪಿ ರಾಡುಗಳು
ಹನೂರು: ಮಹದೇಶ್ವರಬೆಟ್ಟದ ಮುಖ್ಯ ರಸ್ತೆಯಲ್ಲಿ ಪ್ರಗತಿಯಲ್ಲಿರುವ ಕಿರು ಸೇತುವೆ ಕಾಮಗಾರಿಯ ಯಮರೂಪಿ ಕಬ್ಬಿಣ ಸರಳುಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಪಟ್ಟಣದ ಎಲ್ಲೇಮಾಳದಿಂದ ಮಲೆ ಮಹದೇಶ್ವರ ಬೆಟ್ಟ ಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮದ್ಯೆ ಕಿರು ಸೇತುವೆಗಳ ಕಾಮಗಾರಿ ನಡೆಯುತ್ತಿದೆ. ರಸ್ತೆಯ ಒಂದು ಬದಿಯಲ್ಲಿ ಕಿರು ಸೇತುವೆ ನಿರ್ಮಾಣವಾಗುತ್ತಿದ್ದು ಮತ್ತೊಂದು ಬದಿಯಲ್ಲಿ ವಾಹನಗಳು ಸಂಚರಿಸುತ್ತಿವೆ. ಈ ಸೇತುವೆಯ ಕಬ್ಬಿಣದ ಸರಳಗಳಿಗೆ ಅಗತ್ಯ ರಕ್ಷಣಾ ಕ್ರಮವನ್ನು ಕೈಗೊಳ್ಳದ ಕಾರಣ ಇತ್ತೀಚೆಗೆ ಬೈಕ್ ಹಿಂಬದಿ ಸವಾರನೊಬ್ಬ ಮೃತಪಟ್ಟ ಘಟನೆಯೂ ನಡೆದಿದೆ. ಕಾಮಗಾರಿ ಸ್ಥಳದಲ್ಲಿ ಯಾವುದೇ ಸೂಚನಾ ಫಲಕ ಇಲ್ಲದ ಕಾರಣ ಅಪಘಾತಗಳಿಗೆ ಆಹ್ವಾನ ನೀಡಿದಂತಾಗುತ್ತಿದೆ. ಇದು ಗುತ್ತಿಗೆದಾರ ಮತ್ತು ಇಲಾಖೆಯ ನಿರ್ಲಕ್ಷ್ಯ ಪ್ರತಿಬಿಂಬಿಸುತ್ತಿದೆ. ರಸ್ತೆ ನಿರ್ಮಾಣ ಸಂದರ್ಭ ಅಗತ್ಯ ಪರ್ಯಾಯ ರಸ್ತೆ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಬದಲು ಅಪಾಯಕಾರಿ ಸ್ಥಳದಲ್ಲೇ ಸಂಚಾರಕ್ಕೆ ಅವಕಾಶ ನೀಡುವುದು ತಪ್ಪು. ಪ್ರಾಣಹಾನಿಗೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಕೂಡಲೇ ಮತ್ತಷ್ಟು ಪ್ರಾಣಹಾನಿ ಆಗುವ ಮುನ್ನ ಯಮರೂಪಿ ಕಬ್ಬಿಣದ ರಾಡುಗಳನ್ನು ಮುಚ್ಚಬೇಕು. ಅಥವಾ ಬ್ಯಾರಿಕೇಟ್ ಹಾಕಿ ಮುನ್ಸೂಚನಾ ಫಲಕ ಹಾಕಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.